ಕೊಟ್ಟೂರೇಶ್ವರ ದೇವಸ್ಥಾನಕ್ಕೆ 'ಎ' ದರ್ಜೆ
ಕೊಟ್ಟೂರು: ಇಲ್ಲಿನ ಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಹಿರೇಮಠ ಇದೀಗ 'ಎ' ಗ್ರೇಡ್ ಪದೋನ್ನತಿ ಹೊಂದಲು ಸನ್ನದ್ಧಗೊಂಡಿದೆ. ಪ್ರಸ್ತುತ ವರ್ಷ ರು. 1.5 ಕೋಟಿ ಆದಾಯ ಗಳಿಸಿದ್ದು, ಈ ಕಾರಣಕ್ಕಾಗಿಯೇ ದೇವಸ್ಥಾನ 'ಎ' ಗ್ರೇಡ್ ಹೊಂದಲಿದೆ. ಇದರೊಂದಿಗೆ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನವೂ 'ಎ' ದರ್ಜೆ ದೇವಸ್ಥಾನವಾಗಲಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.
ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳಲ್ಲಿನ ಪ್ರಸಿದ್ಧ ದೇವಸ್ಥಾನಗಳಾದ ಕೊಟ್ಟೂರೇಶ್ವರ, ಮೈಲಾರಲಿಂಗೇಶ್ವರ, ಕುರುವತ್ತಿ ಬಸವೇಶ್ವರ ದೇವಸ್ಥಾನಗಳ ಆಡಳಿತ ಗ್ರೂಪ್ ಟೆಂಪಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಕಾರ್ಯನಿರ್ವಾಹಕ ಅಧಿಕಾರಿಯ ಆಡಳಿತ ವ್ಯಾಪ್ತಿಯಲ್ಲಿ ಈ ಮೂರು ಪ್ರಮುಖ ದೇವಸ್ಥಾನಗಳು ಬರುತ್ತವೆ. ಕೊಟ್ಟೂರೇಶ್ವರ ಮತ್ತು ಮೈಲಾರಲಿಂಗೇಶ್ವರ ದೇವಸ್ಥಾನಗಳು ಇನ್ನು ಮುಂದೆ ತಹಸೀಲ್ದಾರ್ ಹುದ್ದೆಗೆ ಸಮಾನಾಂತರವಾದ ಅಧಿಕಾರಿಯನ್ನು ಪ್ರತ್ಯೇಕವಾಗಿ ಹೊಂದಲಿವೆ. ಇವರ ಅಡಿಯಲ್ಲಿ ಒಬ್ಬ ಲೆಕ್ಕ ಅಧೀಕ್ಷಕ, ಒಬ್ಬ ಪ್ರಥಮ ದರ್ಜೆ ಸಹಾಯಕ, ಒಬ್ಬ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಗ್ರೂಪ್ ಟೆಂಪಲ್ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಸುತಗುಂಡಿ ಸೋಮವಾರ ತಿಳಿಸಿದರು.
ಮತ್ತಷ್ಟು ಅಭಿವೃದ್ಧಿ ನಿರೀಕ್ಷೆ: ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಸ್ವತಂತ್ರವಾಗಿ ಕಾರ್ಯನಿರ್ವಾಹಣಾಧಿಕಾರಿಯಡಿ ಇಲ್ಲಿಯೇ ಕಾರ್ಯಾಲಯ ಹೊಂದುವುದರಿಂದ ಮತ್ತಷ್ಟು ಅಭಿವೃದ್ಧಿ ಹೊಂದಬಹುದು ಎಂದು ಸ್ಥಳೀಯರು ನಿರೀಕ್ಷಿಸಿದ್ದಾರೆ. ಈಗಾಗಲೇ ದೇವಸ್ಥಾನದ ಹಿಂಭಾಗದ ಭಕ್ತರ ವಸತಿಗೆ 30ಕ್ಕೂ ಅಧಿಕ ಕೊಠಡಿಗಳ ಸಮುಚ್ಚಯ ನಿರ್ಮಾಣಗೊಂಡಿವೆ. ಪಟ್ಟಣದ ಮತ್ತೊಂದೆಡೆ ಬೃಹತ್ತಾದ ಯಾತ್ರಿ ನಿವಾಸ ನಿರ್ಮಾಣಗೊಂಡಿದೆ. ಕೊಠಡಿ ಸಮುಚ್ಚಯ ನಿರ್ಮಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ದೇವಸ್ಥಾನಕ್ಕೆ ಬೆಳ್ಳಿ ಪ್ರವೇಶ ಬಾಗಿಲು ನಿರ್ಮಿಸುವ ಯತ್ನ ನಡೆದಿದೆ. ಒಟ್ಟಾರೆಯಾಗಿ ಕೊಟ್ಟೂರೇಶ್ವರ ದೇವಸ್ಥಾನದ ಭಕ್ತರು ಮತ್ತು ಸರ್ಕಾರದ ಅನುದಾನದಿಂದ ಮತ್ತಷ್ಟು ಅಭಿವೃದ್ಧಿ ಹೊಂದುವ ನಿರೀಕ್ಷೆಯನ್ನು ಭಕ್ತರು ಹೊಂದಿದ್ದಾರೆ.