ರುದ್ರಭೂಮಿ ಅತಿಕ್ರಮಣ: ದೂರು
ಮುನಿರಾಬಾದ್: ಇಲ್ಲಿನ ಚಲ್ಲಯ್ಯಾ ಕಾಲೋನಿಯಲ್ಲಿರುವ ಸಾರ್ವಜನಿಕ ರುದ್ರಭೂಮಿಯನ್ನು ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳು ಅತಿಕ್ರಮಿಸಿಕೊಂಡು ತೋಟಗಾರಿಕೆ ಫಾರಂ ಹಾಗೂ ಅಕ್ರಮ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ರುದ್ರಭೂವಿಯ ಸುಮಾರು 2 ಎಕರೆ ಜಾಗ ಅತಿಕ್ರಮಣವಾಗಿದೆ ಎಂದು ಮುನಿರಾಬಾದಿನ ಸುಮಾರು 50ಕ್ಕೂ ಅಧಿಕ ಮಂದಿ ದೂರು ನೀಡಿದ್ದು, ದೂರಿನ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ದಾಖಲೆ ಇಲ್ಲ: ಈ ವಿಷಯಕ್ಕೆ ಸಂಬಂಧಿಸಿದಂತೆ ಮುನಿರಾಬಾದಿನ ನಿವಾಸಿಗಳಾದ ರವೀಂದ್ರ ಮತ್ತು ಕೃಷ್ಣ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳಿದಾಗ ಮುನಿರಾಬಾದ್ ಗ್ರಾಮ ಮಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೀಡಿದ ಮಾಹಿತಿ ಅಚ್ಚರಿ ಮೂಡಿಸಿದೆ. ಹಿಂದು ಮತ್ತು ಮುಸ್ಲಿಂ ಸಮಾಜದ ಜನರ ಶವಸಂಸ್ಕಾರಕ್ಕೆ ಮೀಸಲಿಟ್ಟ ಜಾಗದ ಅಳತೆ, ನಕ್ಷೆ ಹಾಗೂ ದಾಖಲಾತಿಗಳು ಗ್ರಾಪಂನಲ್ಲಿ ಲಭ್ಯವಿಲ್ಲ ಎಂದು ಹೇಳಿದ್ದಾರೆ.
ರುದ್ರಭೂಮಿಯಲ್ಲಿ ಕಾಮಗಾರಿ: ಅಧಿಕೃತ ದಾಖಲಾತಿಗಳಿಲ್ಲದಿದ್ದರೂ ಪಂಚಾಯ್ತಿ ಮಾತ್ರ 2010-11ನೇ ಸಾಲಿನಲ್ಲಿ ರುದ್ರಭೂವಿಯಲ್ಲಿ ಎನ್ಆರ್ಇಜಿ ಯೋಜನೆಯಡಿ ಸುಮಾರು ರು. 1 ಲಕ್ಷದ ಕಾಮಗಾರಿ ಕೈಗೊಂಡಿದೆ ಎಂದು ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ತೆರವುಗೊಳಿಸಿ: ರುದ್ರಭೂಮಿ ಶೀಘ್ರವೇ ತೆರವುಗೊಳಿಸಿ. ಅದನ್ನು ಸರ್ವೇ ಮಾಡಿಸಿ ಸೀಮಾ ರೇಖೆಯನ್ನು ನಿಗದಿ ಮಾಡಬೇಕೆಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸದಿದ್ದರೆ ಮುಂಬರುವ ದಿನಗಳಲ್ಲಿ ರುದ್ರಭೂಮಿ ಸಂಪೂರ್ಣಅತಿಕ್ರಮಣವಾಗಿ ಅಂತ್ಯ ಸಂಸ್ಕಾರಕ್ಕೆ ಜಾಗ ಇಲ್ಲದಂತಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.