ಹೊಸಪೇಟೆ ಉದ್ಯಾನದಲ್ಲಿ ಲೇಸರ್ ಶೋ: ಆನಂದ್ಸಿಂಗ್
ಹೊಸಪೇಟೆ: ನಗರದ ಮುರಾರಿ ಶ್ರೀರಾಮುಲು ಪಾರ್ಕ್ನಲ್ಲಿ ರು. 1 ಕೋಟಿ ವೆಚ್ಚದಲ್ಲಿ ಲೇಸರ್ ಶೋ ಅಳವಡಿಸಲಾಗುವುದು ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್ ಸಿಂಗ್ ಹೇಳಿದರು.
ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ರಜಪೂತ್ ಕೋಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುರಾರಿ ಶ್ರೀರಾಮುಲು ಪಾರ್ಕ್ನಲ್ಲಿ ಪ್ರತಿನಿತ್ಯವೂ ಬೆಳಗ್ಗೆ ಮತ್ತು ಸಂಜೆ ಸಾವಿರಾರು ಜನರು ವಾಯುವಿಹಾರ, ವಿಶ್ರಾಂತಿಗಾಗಿ ಬರುವವರನ್ನು ಆಕರ್ಷಿಸಲಿದೆ. ನೀರಿನ ಕಾರಂಜಿ ಬೆಳಕಿನಲ್ಲಿ ಕೆಲ ಪ್ರದರ್ಶನಗಳು, ದೇಶಭಕ್ತಿ ಪ್ರದರ್ಶಿಸುವಂತಹ ರೂಪಕಗಳು, ಇತರ ಪ್ರದರ್ಶನಗಳನ್ನು ಲೇಸರ್ ಶೋನಲ್ಲಿ ಅಳವಡಿಸಲಾಗುತ್ತಿದೆ ಎಂದರು.
ವಿಜಯನಗರ ನೂತನ ಬಸ್ ನಿಲ್ದಾಣದ ಉಳಿದ ಅರ್ಧ ಭಾಗ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಜು. 1ರಿಂದ ಆರಂಭಿಸಲಾಗುತ್ತದೆ. ಆರಂಭಗೊಂಡ ಕಾಮಗಾರಿ ಭರದಿಂದ ನಡೆಯುತ್ತಿದೆ. ಅತ್ಯಂತ ಗುಣಮಟ್ಟದಿಂದ ಮತ್ತು ಆಕರ್ಷಕವಾದ ರೀತಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಈಗಾಗಲೇ ಅರ್ಧ ಭಾಗದ ಬಸ್ ನಿಲ್ದಾಣ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಳಿದ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಅನಂತರ ಅತ್ಯಂತ ಸುಂದರವಾದ ಮತ್ತು ಆಕರ್ಷಕವಾದ ಬಸ್ ನಿಲ್ದಾಣವಾಗಲಿದೆ ಎಂದು ಅವರು ಹೇಳಿದರು.
ಕುಡಿವ ನೀರು: ಹೊಸಪೇಟೆ ನಗರದಲ್ಲಿ ಮುಂದಿನ ದಿನಗಳಲ್ಲಿ ಎರಡು ಬಾರಿ ಕುಡಿಯುವ ನೀರು ಬಿಡಲು ಯೋಜನೆ ರೂಪಿಸಲಾಗುತ್ತಿದೆ. ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಯೋಜನೆ ರೂಪಿಸಲಾಗುತ್ತಿದೆ. ರು. 70 ಕೋಟಿ ವೆಚ್ಚದಲ್ಲಿ ನಗರದ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ನಗರದಲ್ಲಿರುವ 103 ಕಿ.ಮೀ. ಹಳೆಯ ನೀರಿನ ಪೈಪ್ಗಳನ್ನು ಕಿತ್ತುಹಾಕಿ ಹೊಸ ಪೈಪ್ಗಳನ್ನು ಅಳವಡಿಸಲಾಗುತ್ತಿದೆ. ರು. 25-30 ಕೋಟಿಗಳನ್ನು ಕುಡಿಯುವ ನೀರಿನ ಪೈಪ್ಲೈನ್ಗಾಗಿ ಖರ್ಚು ಮಾಡಲಾಗುತ್ತಿದೆ ಎಂದರು. ನಗರದ ಹೊರವಲಯದಲ್ಲಿರುವ ಬುಡ್ಗ ಜಂಗಮ ಸಮುದಾಯದ ವಸತಿ ಕಾಲೋನಿಯಲ್ಲಿ ರು. 87 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಗರದಲ್ಲಿ ರು. 83 ಲಕ್ಷ ವೆಚ್ಚದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಕುಡಿಯುವ ನೀರಿನ ಕಾಮಗಾರಿಗಳು ಅತಿ ಶೀಘ್ರದಲ್ಲೇ ಆರಂಭಗೊಳ್ಳಲಿವೆ ಎಂದರು.
ಪ್ರವಾಸಿ ತಾಣ ಅಭಿವೃದ್ಧಿ: ವಿಜಯನಗರ ಕಾಲುವೆಗಳ ದುರಸ್ತಿಗಾಗಿ ರು. 250 ಕೋಟಿ ಮಂಜೂರಾಗಿದ್ದು, ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕಾಗಿದೆ. ಡಿಸೆಂಬರ್ನಲ್ಲಿ ಕಾಲುವೆಗಳ ಕಾಮಗಾರಿ ನಡೆಯಲಿವೆ. ಜುಂಬುನಾಥ ಗುಡ್ಡದಲ್ಲಿ ರು. 2 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿದ್ದು, ಈಗ ಮೆಟ್ಟಲುಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಜೋಳದರಾಶಿ ಗುಡ್ಡ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ. ಆದಷ್ಟು ಬೇಗನೆ ಕಾಮಗಾರಿಗಳು ಆರಂಭವಾಗಲಿವೆ ಎಂದರು.
ನಗರೋತ್ಥಾನ ಯೋಜನೆಯಲ್ಲಿ ಬಿಡುಗಡೆಯಾದ ರು. 50 ಕೋಟಿಯಲ್ಲಿ ರು. 20 ಕೋಟಿ ಮಾತ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಿದೆ. ಉಳಿದ ರು. 30 ಕೋಟಿ ರಸ್ತೆ ಅಭಿವೃದ್ಧಿಗೆ ಬಳಸಲಾಗುವುದು. ನಗರದ ಪ್ರಮುಖ ರಸ್ತೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.