ಕೆಲಸ ವಿಳಂಬವಾದರೆ ಬ್ಲಾಕ್ಲಿಸ್ಟ್ಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 26
ನಗರಾಭಿವೃದ್ಧಿ ಇಲಾಖೆ ಗುತ್ತಿಗೆದಾರರ ಕೈಯಲ್ಲಿರಬಾರದು ಬದಲಾಗಿ ಇಲಾಖೆಯ ಕೈಯಲ್ಲಿ ಗುತ್ತಿಗೆದಾರರು ಇರಬೇಕು. ಕೆಲಸ ವಿಳಂಬ ಮಾಡಿದ ಗುತ್ತಿಗೆದಾರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಿ, ಇಂಥವರನ್ನು ತಾವು ಯಾವತ್ತಿಗೂ ಬೆಂಬಲಿಸುವುದಿಲ್ಲ. ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡಬೇಕು ಎಂದು ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಅಣತಿಯಂತೆ ಯಾವತ್ತೂ ಇಲಾಖೆ ಇರಬಾರದು. ಇಲಾಖೆಯ ಅಣತಿಯಂತೆ ಗುತ್ತಿಗೆದಾರರನ್ನು ನಡೆಸಿಕೊಳ್ಳಬೇಕು. ಪಾಲಿಕೆಗಳು ಮಹಾನಗರ ಪಾಲಿಕೆ ಸ್ವರೂಪ ಪಡೆದುಕೊಳ್ಳಬೇಕಿರುವುದ ಅಗತ್ಯ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯ ಮಾಡಬೇಕಾಗಿದೆ. ಮಹಾನಗರ ಪಾಲಿಕೆಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಟ್ಟುಕೊಂಡು ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.
3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ: ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು, ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ನಡೆಸಿದ ಚರ್ಚೆಗಳು, ಸಮಸ್ಯೆಗಳು 3 ತಿಂಗಳ ಅನಂತರ ನಡೆಸುವ ಸಭೆಯಲ್ಲಿ ಚರ್ಚೆಗೆ ಬರುತ್ತವೆ. ಅಷ್ಟೊತ್ತಿಗೆ ಸಮಸ್ಯೆಗಳು ಪರಿಹಾರವಾಗಿರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳನ್ನು ಕರೆದು ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತದೆ. ಇದರಿಂದಾಗಿ ಯಾವುದೇ ಸಮಸ್ಯೆಗಳು ಇದ್ದರೆ ಸ್ಥಳದಲ್ಲೇ ಇತ್ಯರ್ಥಪಡಿಸಬಹುದು. ಸಿಬ್ಬಂದಿ ಕೊರತೆ ಸೇರಿದಂತೆ ಇತರ ಸರ್ಕಾರದ ಮಟ್ಟದ ಸಮಸ್ಯೆಗಳಿಗೆ ತಾವು ಉತ್ತರ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
ಶೀಘ್ರವೇ ಮೀಸಲಾತಿ ಪ್ರಕಟ: ಬಿಬಿಎಂಪಿ ಮೀಸಲಾತಿ ವಿಷಯ ಹೈಕೋರ್ಟ್ನಲ್ಲಿದ್ದು, ಜೂ. 27ರಂದು ತೀರ್ಪು ಬರುವುದರಿಂದ ಶೀಘ್ರದಲ್ಲೇ ಮೀಸಲಾತಿ ಘೋಷಣೆ ಮಾಡಲಾಗುತ್ತದೆ. ಮಹಾನಗರ ಪಾಲಿಕೆಗೆ 3ನೇ ಹಂತದ ರು. 100 ಕೋಟಿ ಬಿಡುಗಡೆ ಮತ್ತು ಸಿಬ್ಬಂದಿ ನೇಮಕದ ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಹಣಕಾಸು ಕಾರ್ಯದರ್ಶಿಯೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು. ಮಹಾನಗರ ಪಾಲಿಕೆ ಆದಾಯ ಹೆಚ್ಚಿಸುವುದು, ಶೇ. 100ರಷ್ಟು ತೆರಿಗೆ ಆಕರಿಸುವುದು, ಜಾಹೀರಾತು ಸುಂಕ ವಸೂಲಿ ಮಾಡುವುದು ಪ್ರಮುಖವಾಗಿ ಮಾಡಬೇಕಾಗಿದೆ. ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆಯನ್ನು ಗಣಕೀಕರಣ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತರಾಟೆಗೆ ತೆಗೆದುಕೊಂಡ ಡಿಸಿ: ಬಳ್ಳಾರಿ ಮಹಾನಗರಕ್ಕೆ 24 ಗಂಟೆ ನೀರು ಪೂರೈಕೆ ಯೋಜನೆ ಇನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ರಾಜ್ಯ ಹಣಕಾಸು ಸಂಸ್ಥೆ, ಜೆಸ್ಕಾಂ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ತರಾಟೆಗೆ ತೆಗೆದುಕೊಂಡರು. ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಬೆರಳು ತೋರಿಸಿ ಸಭೆಯನ್ನು ದಾರಿ ತಪ್ಪಿಸಲು ಮುಂದಾಗಬೇಡಿ. ಜುಲೈ ಒಳಗಾಗಿ ಯೋಜನೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜೆಸ್ಕಾಂ ಸಹಾಯಕ ಅಭಿಯಂತ ಸರಿಯಾಗಿ ಉತ್ತರ ನೀಡದಿದ್ದರಿಂದ ಸಭೆಗೆ ಮೇಲಧಿಕಾರಿಗಳನ್ನು ಕರೆದು, ಬಳ್ಳಾರಿ ನಗರದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಕುರಿತು ಸಚಿವರು ತರಾಟೆಗೆ ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ತಾಕೀತು ಮಾಡಿದರು.
ಆಯುಕ್ತರ ಕ್ರಮಕ್ಕೆ ಮೆಚ್ಚುಗೆ: ನೂರಾರು ಖಾಲಿ ಹುದ್ದೆಗಳ ನಡುವೆ ಮಹಾನಗರ ಪಾಲಿಕೆಯನ್ನು ನಡೆಸಿಕೊಂಡು ಹೋಗುತ್ತಿರುವ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ ಅವರ ಕಾರ್ಯವನ್ನು ಜಿಲ್ಲಾಧಿಕಾರಿ ಬಿಸ್ವಾಸ್ ಅವರು ಅಭಿನಂದಿಸಿದರು.
ದಿನದ 4 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆ. ಇಂತಹ ಅಧಿಕಾರಿಗಳಂತೆ ಇತರ ಅಧಿಕಾರಿಗಳು ವರ್ತಿಸಿ, ಪಾಲಿಕೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪಾಲಿಕೆಯ ಇತರ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಲೋಕಸಭಾ ಸದಸ್ಯೆ ಜೆ. ಶಾಂತಾ, ಬಳ್ಳಾರಿ ಶಾಸಕ ಅನಿಲ್ ಲಾಡ್, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಸೇರಿದಂತೆ ಇತರರು ಇದ್ದರು.