ನಾಳೆ ಪರೀಕ್ಷೆ: ನಿಷೇಧಾಜ್ಞೆ
ಬಳ್ಳಾರಿ: ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆ ಜೂ. 30ರಂದು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಈ ಪರೀಕ್ಷಾ ದಿನದಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಎಲ್ಲಾ ಝೆರಾಕ್ಸ್ ಸೆಂಟರ್, ಸೈಬರ್ ಕೆಫೆಗಳನ್ನು ಮುಚ್ಚಬೇಕು. ಶಸ್ತ್ರ, ಬಡಿಗೆ, ಬಂದೂಕು, ಲಾಠಿ ಅಥವಾ ಶರೀರಕ್ಕೆ ಹಾನಿಯಾಗುವ ವಸ್ತುಗಳು, ನಾಶಕಾರಿ ಇಲ್ಲವೇ ಸ್ಫೋಟಕ ವಸ್ತುಗಳನ್ನು ಒಯ್ಯುವಂತಿಲ್ಲ. ಬಹಿರಂಗ ಘೋಷಣೆಗಳನ್ನು ಕೂಗುವಂತಿಲ್ಲ ಎಂದು ಅವರು ಆದೇಶಿಸಿದ್ದಾರೆ.
ಇಂದು ಉಡಿ ತುಂಬುವ ಕಾರ್ಯಕ್ರಮ
ಬಳ್ಳಾರಿ: ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ 18ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶಿವಶಾಂತವೀರ ಶರಣರ 38ನೇ ತುಲಾಭಾರ ಸಮಾರಂಭ ಜೂ. 30ರಂದು ನಗರದ ಬಸವಭವನದಲ್ಲಿ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸುಕ್ಷೇತ್ರ ಬಳಗನೂರಿನ ಶಿವಶಾಂತವೀರ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಂಡಿತ ಪಂಚಾಕ್ಷರಿ ಶಾಸ್ತ್ರಿಗಳಿಂದ ಉಪನ್ಯಾಸ ಹಾಗೂ ಶಂಕರಯ್ಯ ಆರ್. ಗುರುಮಠ ಕಲ್ಲೂರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಚನ್ನವೀರ ಶರಣರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಸನ್ಮಾನ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ಕನಕ ನೌಕರರ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಾಲಿಕೆಯ ಹಾಲುಮತ ಸಮಾಜದ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂ. 30ರ ಬೆಳಗ್ಗೆ 10ಕ್ಕೆ ನಗರದಲ್ಲಿ ಗಾಂಧಿಭವನದಲ್ಲಿ ಏರ್ಪಡಿಸಲಾಗಿದೆ. 2012-13ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕುರುಬ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಾಲಿಕೆಯ ಹಾಲುಮತ ಸಮಾಜದ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.