ದೇವಸ್ಥಾನ ವಶಕ್ಕೆ ಆರು ತಿಂಗಳು ಸಾಕು: ಶ್ರೀ
ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನವನ್ನು ಕಾಗಿನೆಲೆ ಗುರುಪೀಠಕ್ಕೆ ನೀಡಬೇಕೆಂದು ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮೌಖಿಕವಾಗಿ ಮನವಿ ಮಾಡಿಕೊಳ್ಳಲಾಗಿತ್ತೆಂದು ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಆಲಿಸಲು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಲಾರಲಿಂಗೇಶ್ವರ ದೇವಸ್ಥಾನವನ್ನು ಕಾಗಿನೆಲೆ ಗುರುಪೀಠದ ವಶಕ್ಕೆ ತೆಗೆದುಕೊಳ್ಳಲು ಕೇವಲ 6 ತಿಂಗಳು ಸಾಕು, ಈ ಕುರಿತು ಎಲ್ಲ ಸಿದ್ಧತೆಗಳು ಪೀಠದಿಂದ ನಡೆದಿವೆ. ಉಡುಪಿ, ಗೋಕರ್ಣ ದೇವಸ್ಥಾನಗಳನ್ನು ಇತರೆ ಸಮುದಾಯಗಳಿಗೆ ಸರ್ಕಾರ ನೀಡಿದ ಹಾಗೆ ತಮ್ಮ ಪೀಠಕ್ಕೆ ಮೈಲಾರಲಿಂಗೇಶ್ವರ ದೇವಸ್ಥಾನವನ್ನು ಬಿಟ್ಟುಕೊಡುವಂತೆ ಕೇಳುವುದರಲ್ಲಿ ತಪ್ಪಿಲ್ಲ ಎಂದು ಉತ್ತರಿಸಿದರು. ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಂಶ ಪಾರಂಪರ್ಯವೆಂದು ಹೇಳಿಕೊಳ್ಳುತ್ತಿರುವ ಗುರು ವೆಂಕಪ್ಪಯ್ಯ ಒಡೆಯರ್ ಯಾವ ಹಿನ್ನೆಲೆಯಲ್ಲಿ ಶ್ರೀಗುರು ಪೀಠ ಕಟ್ಟಿಕೊಂಡಿದ್ದಾರೆಂದು ಪ್ರಶ್ನಿಸುತ್ತಾ, ಇದೇ ಮಾದರಿಯಲ್ಲಿ ಕಾರ್ಣಿಕ ನುಡಿಯುವ ಗೊರವಯ್ಯನು ಕೂಡಾ ವಂಶಪಾರಂಪರ್ಯವಾಗಿ ಕಾರ್ಣಿಕ ನುಡಿಯುತ್ತಾ ಬಂದಿದ್ದಾನೆ. ಗೊರವಯ್ಯನಿಗೆ ಕುಳಿತುಕೊಳ್ಳುವ ಪೀಠ ಕಟ್ಟಲು ವೆಂಕಪ್ಪಯ್ಯ ಅವಕಾಶ ನೀಡಿಲ್ಲ ಎಂದರು.