ಬಿಎಸ್ಸಾರ್ ಮುಗಿಸಲು ಸರ್ಕಾರದಿಂದ ಷಡ್ಯಂತ್ರ
ಕೊಟ್ಟೂರು: ಬಿಎಸ್ಸಾರ್ ಕಾಂಗ್ರೆಸ್ನ ರಾಜಕೀಯ ಚಟುವಟಿಕೆಯ ಸಂಪೂರ್ಣ ನಿಯಂತ್ರಣಗೊಳಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಎಸ್ಪಿ ಮೂಲಕ ನಡೆಸಿದೆ. ಇದರ ವಿರುದ್ಧ ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಎಂದು ಬಿಎಸ್ಸಾರ್ ರಾಜ್ಯಾಧ್ಯಕ್ಷ, ಶಾಸಕ ಬಿ. ಶ್ರೀರಾಮುಲು ಹೇಳಿದರು.
ಭಾನುವಾರ ಇಲ್ಲಿನ ಪಪಂ ಚುನಾವಣೆ ನಿಮಿತ್ತ ಅಭ್ಯರ್ಥಿಗಳ ಪರ ಪ್ರಚಾರಾರ್ಥವಾಗಿ ರೋಡ್ ಶೋ ನಡೆಸಿ ನಂತರ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷಕ್ಕೆ ತೊಂದರೆ ಮಾಡಬೇಕೆಂಬ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಅಧಿಕಾರಿಗಳ ಮೂಲಕ ಒಂದಿಲ್ಲೊಂದು ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆಸುತ್ತಿದೆ. ಅಧಿಕಾರಿಗಳು ಚುನಾವಣಾ ಪ್ರಚಾರದಲ್ಲಿ ಉಳಿದೆಲ್ಲಾ ಪಕ್ಷಗಳ ನಾಯಕರಿಗೆ ನೀಡದ ತೊಂದರೆಯನ್ನು ತಮಗೆ ನೀಡುತ್ತಿರುವುದನ್ನು ಸವಾಲಾಗಿ ಪರಿಗಣಿಸಿ, ಚುನಾವಣಾ ಫಲಿತಾಂಶದ ಮೂಲಕ ಇವರಿಗೆ ಉತ್ತರ ನೀಡುವೆ ಎಂದರು.
ಕೊಟ್ಟೂರು ಪಟ್ಟಣವನ್ನು ಸುಂದರ ಮತ್ತು ಯೋಜಿತ ನಗರವನ್ನಾಗಿ ಅಭಿವೃದ್ಧಿಪಡಿಸಲು ಹಲವು ಯೋಜನೆಗಳನ್ನು ಬಿಎಸ್ಸಾರ್ ಕಾಂಗ್ರೆಸ್ ಕೈಗೊಂಡಿದ್ದು, ಪಟ್ಟಣ ಪಂಚಾಯಿತಿಯ ಅಧಿಕಾರ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಲಭಿಸುವಂತೆ ಮಾಡಲು 20 ವಾರ್ಡ್ಗಳಲ್ಲಿ ಸ್ಪರ್ಧೆಗಿಳಿದಿರುವ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸುವಂತೆ ಅವರು ಕೋರಿದರು. ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆ ಅತಿ ಮಹತ್ವದ್ದಾಗಿದ್ದು, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಜಿಪಂ ಸದಸ್ಯ ಭೀಮಾ ನಾಯ್ಕ್ರನ್ನು ಕಣಕ್ಕಿಳಿಸಲಾಗುತ್ತಿದೆ. ಭೀಮ ನಾಯ್ಕ ಅವರನ್ನು ಹೆಚ್ಚು ಮತದಿಂದ ಚುನಾಯಿಸಬೇಕೆಂದು ಕೋರಿದರು.
ಸಂಸದೆ ಶಾಂತಾ, ಮಾಜಿ ಶಾಸಕ ಶಿರಾಜ್ ಶೇಖ್, ಜಿಪಂ ಸದಸ್ಯ ಭೀಮ ನಾಯ್ಕ, ಮುಖಂಡರಾದ ಎಂ.ಎಂ.ಜೆ. ಸ್ವರೂಪಾನಂದ, ಕೆ. ಜಾತಪ್ಪ, ಮೂಗಪ್ಪ, ಬೇಲಿಗೌಡ್ರು ಸೋಮಶೇಖರಗೌಡ, ಅಡಿಟರ್ ನಟರಾಜ್ ಇದ್ದರು.