ಹೃದಯಗಳಲ್ಲಿ ಭಾವೈಕ್ಯದ ಬೀಜ ಬಿತ್ತಿ
ಹೊಸಪೇಟೆ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಹೃದಯಗಳಲ್ಲಿ ಭಾವೈಕ್ಯದ ಬೀಜ ಬಿತ್ತಬೇಕಾಗಿದೆ ಎಂದು ನಾಡೋಜ ದೇವನೂರು ಮಹಾದೇವ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಸ್ಪೃಶ್ಯ ಸಮುದಾಯಗಳು ಧರ್ಮಕ್ಕಾಗಿ ಧರ್ಮ ಎಂದು ನೋಡುವ ಬದಲು, ವಿವಿಧ ದಾರಿಗಳಲ್ಲಿ ಚಲಿಸಬೇಕಿದೆ. ಭಾರತ ಎಂಬುದು ಜಾತಿ-ಮತಗಳ ಮತ್ತು ತಾರತಮ್ಯಗಳಿಂದ ಕೂಡಿದ ಚಿಂದಿಬಟ್ಟೆಯಂತೆ ಇದೆ. ಇದನ್ನು ಕೂಡಿಸಿ ಕೌದಿ ಮಾಡುವ ಮೂಲಕ ಸೂಕ್ತ ಸಮಾಜದ ನಿರ್ಮಾಣ ಆಗಬೇಕಾಗಿದೆ. ವ್ಯವಸ್ಥೆಯಿಂದ ಗಾಯಗೊಂಡಿರುವ ಸಮಾಜವನ್ನು ವಾಸಿ ಮಾಡುವುದು ಹೇಗೆ ಎಂದು ಚಿಂತಿಸಬೇಕಿದೆ ಎಂದರು.
ನಮ್ಮ ಸಾಮಾಜಿಕ ಸಂಬಂಧಗಳನ್ನು ಗುಣಾತ್ಮಕಗೊಳಿಸಿಕೊಳ್ಳಬೇಕಾದರೆ ಬುಡಕಟ್ಟುಗಳಲ್ಲಿ ಇರುವ ಆರೋಗ್ಯಕರ ಮೌಲ್ಯಗಳನ್ನು ಅಧ್ಯಯನ ಮಾಡಬೇಕಾಗಿದೆ. ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ಕನಸುಗಳನ್ನು ಹೊತ್ತ ಹುಚ್ಚರಾಗಬೇಕು. ಕನ್ನಡ ನಾಡಿನ ವಿವಿಧ ಪಠ್ಯಗಳನ್ನು ಕನ್ನಡ ವಿಶ್ವವಿದ್ಯಾಲಯವು ರೂಪಿಸುವಂತಾಗಬೇಕು. ಪಠ್ಯಪುಸ್ತಕ ರಚನೆಗೆ ಕನ್ನಡ ವಿಶ್ವವಿದ್ಯಾಲಯ ಕೇಂದ್ರವಾಗಬೇಕು ಎಂದು ಮಹಾದೇವ ಆಶಿಸಿದರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವಿವಿಯ ಹಿರಿಯ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಸ್ವಾಗತಿಸಿ, ಸಂವಾದಕ್ಕೆ ಚಾಲನೆ ನೀಡಿದರು.