ಇಂದು ಕನ್ನಡ ಭಾಷಾ ಕಮ್ಮಟ
ಬಳ್ಳಾರಿ: ಕನ್ನಡ ಭಾಷಾ ಕಮ್ಮಟ 2012-13ರ ಕಾರ್ಯಕ್ರಮವನ್ನು ಮಾ. 6ರಂದು ಬೆಳಗ್ಗೆ 10 ಗಂಟೆಯಿಂದ ತಾಲೂಕಿನ ಹಲಕುಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ಗ್ರಾಮೀಣ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಸಂಸ್ಥೆಯ ಪ್ರಾಚಾರ್ಯ ಬಿ. ಮಾಳೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಾರ್ತಾಧಿಕಾರಿ ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಶಿಕ್ಷಕ ಕೆ.ಬಿ. ಸಿದ್ದಲಿಂಗಪ್ಪ, ನಿವೃತ್ತ ಪ್ರಾಚಾರ್ಯ ಡಾ ಎ. ವೃಷಭೇಂದ್ರಾಚಾರ್, ಉಪನ್ಯಾಸಕ ಎಸ್.ಪಿ. ಹೊಂಬಳ, ಡಾ ಯು. ಷಡಾಕ್ಷರಗೌಡ, ಕೆ.ವಿ. ಜಯಲಕ್ಷ್ಮಿ ಅವರು ವಚನ ಸಾಹಿತ್ಯ, ಕನ್ನಡ ಕವಿಗಳ ಭಾವಗೀತೆಗಳು ಮತ್ತು ರನ್ನನ ಗದಾಯುದ್ಧ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ತಿಳಿಸಿದ್ದಾರೆ.
ಬಾಲಕಿಯರ ಅಪಹರಣ: ದೂರು
ಬಳ್ಳಾರಿ: ನಗರದ ಸರ್ಕಾರಿ ಬಾಲಮಂದಿರದ ಮೂವರು ಮಕ್ಕಳು ಶಾಲೆಗೆ ಹೋಗುವ ವೇಳೆ ಆಪಹರಣ ಆಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಬಾಲಮಂದಿರದ ರೇಷ್ಮಾ (12), ರೇಣುಕಾ (12), ಗಾಯತ್ರಿ (11) ಅಪಹೃತ ಬಾಲಕಿಯರು. ಸೋಮವಾರ ಬೆಳಗ್ಗೆ ಬಾಲಮಂದಿರದ ಆಯಾ ಫಾತಿಮಾ ಜತೆ ಪಾರ್ವತಿನಗರದಲ್ಲಿರುವ ಶಾಲೆಗೆ ತೆರಳುತ್ತಿರುವಾಗ, ಎಸ್ಪಿ ಸರ್ಕಲ್ ಸಮೀಪ ಬಾಲಕಿಯೊಬ್ಬಳು ಎಡವಿ ಬಿದ್ದಿದ್ದಾಳೆ. ಎಲ್ಲರ ದೃಷ್ಟಿ ಅತ್ತಕಡೆ ಹೋದ ಸಂದರ್ಭದಲ್ಲಿ ಮೂವರ ಬಾಲಕಿಯರು ಅಪಹರಣವಾಗಿದ್ದಾರೆ ಎಂದು ಬಾಲಮಂದಿರದ ಪ್ರಭಾರಿ ಅಧೀಕ್ಷಕಿ ನಾಗಮಾಣಿಕ್ಯ ನಗರದ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.