ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಮಹಾ ಮಾನವತವಾದಿಯ ರಥೋತ್ಸವ

Lingaraj Badiger
Updated On : 6 Mar 2013, 11:48 am

- ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 5
ಧಾರ್ಮಿಕ ಕಾರ್ಯಕ್ರಮಗಳು ಮೇಲ್ಜಾತಿಗೆ ಸೀಮಿತ, ದೇವಸ್ಥಾನಗಳಲ್ಲಿ ಅವರಿಗೇ ಆದ್ಯತೆ ಎಂಬ ಮಾತಿದೆ. ಆದರೆ ಹರಿಜನ ಮಹಿಳೆಯೊಬ್ಬಳು ಆರತಿ ಬೆಳಗಿದ ನಂತರವೇ ಬಳ್ಳಾರಿ ಜಿಲ್ಲೆಯ ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗಳ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಇಂತಹ ಪದ್ಧತಿ ಮೂಲಕ ಗುರುಕೊಟ್ಟೂರೇಶ್ವರ ರಥೋತ್ಸವವು ನಾಡಿನ ಗಮನ ಸೆಳೆದಿದೆ.
ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮಾ. 6ರ ಬುಧವಾರ ಸಂಜೆ ನಡೆಯಲಿರುವ ರಥೋತ್ಸವಕ್ಕೆಂದೇ ಕೊಟ್ಟೂರು ಪಟ್ಟಣ ಈಗಾಗಲೇ ಸಜ್ಜುಗೊಂಡಿದೆ.
 ಅಸ್ಪೃಶ್ಯತೆ ಮಹಾಪಾಪ ಎಂದು ಪ್ರತಿಪಾದಿಸಿದ್ದ ಭಕ್ತರ ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಹರಿಜನ ಮಹಿಳೆ ಕರಿಯಮ್ಮನ ಮಗಳು ಉಡುಸುಲಮ್ಮ ಕಳಸದಾರತಿ ಬೆಳಗಿದ ನಂತರವೇ ರಥೋತ್ಸವಕ್ಕೆ ಚಾಲನೆ ದೊರೆಯುವುದು.
ಹಿಂದೂ ಧರ್ಮದ ಬಹುತೇಕ ಎಲ್ಲ ಹಬ್ಬ ಹರಿದಿನಗಳು ಶುಭ ಮುಹೂರ್ತದಲ್ಲಿ ನಡೆದರೆ, ಶ್ರೀಸ್ವಾಮಿಯ ರಥೋತ್ಸವ ಮಾತ್ರ ಅಶುಭವೆಂದೇ ಪರಿಗಣಿಸಿರುವ ಮೂಲಾ ನಕ್ಷತ್ರದಲ್ಲಿ ಜರುಗುವುದು. ಇಂತಹ ಹಲವು ವೈಶಿಷ್ಟ್ಯಗಳಿಂದಾಗಿ ಇದು ಆಕರ್ಷಿತವಾಗಿದೆ.
ಯೋಗ ಸಮಾಧಿ: 16ನೇ ಶತಮಾನದ ಪೂರ್ವಾರ್ಧದಲ್ಲಿ ಬಾಳಿ ಬದುಕಿದ ಕೊಟ್ಟೂರೇಶ್ವರರು ಜೀವಂತ ಯೋಗ ಸಮಾಧಿ ಹೊಂದಿ ಮಹಾಮಹಿಮರಾದರು. ಸಾಮಾಜಿಕ ಸಮಾತನೆಯ ಆಶಯಗಳನ್ನು ಸಾಕಾರಗೊಳಿಸಲು ಯತ್ನಿಸಿದ ಬಸವಾದಿ ಶರಣರ ಸಾಲಿನಲ್ಲಿ ಕೊಟ್ಟೂರೇಶ್ವರರು ಸೇರುತ್ತಾರೆ. ರಾಷ್ಟ್ರಕೂಟ ಚಕ್ರೇಶ್ವರ ಕೊಟ್ಟಿಗರ (ಕ್ರಿಶ.967-972) ಹೆಸರಿನಲ್ಲಿ ನಿರ್ಮಾಣವಾದ ಈ ಊರು ಕೊಟ್ಟಿಗನ ಊರು, ಕಾಲಕ್ರಮೇಣ ಕೊಟ್ಟೂರು ಆಯ್ತು.
ಡಾ. ಶಿವರಾಮ ಕಾರಂತರ ಅಭಿಪ್ರಾಯದಂತೆ ಕೊಟ್ಟೂರಿಗೆ ಈ ಹೆಸರು ಬದಲು ಇಲ್ಲಿನ ಗ್ರಾಮ ದೇವತೆ ಕೊಟ್ಟೆವ್ವ ಕಾರಣ. ಮಾತೃ ಸಂಸ್ಕೃತಿಯ ದ್ರಾವಿಡರು ಈ ಭಾಗದಲ್ಲಿ ತಾಯಿಯನ್ನು ಕೊಟ್ಟೆವ್ವ ಎಂದು ಪೂಜಿಸುತ್ತಿದ್ದರು. ಈಕೆ ನೆಲೆಸಿದ ಊರು ಕೊಟ್ಟೆವ್ವನ ಊರು. ಕೊಟ್ಟೂರು ಎಂದಾಗಿದೆ ಎಂದು ವಾದಿಸಿದ್ದಾರೆ.
ಕಲ್ಯಾಣ ಚಾಲುಕ್ಕರ ಕಾಲಕ್ಕಾಗಲೇ ಅಭಿವೃದ್ಧಿ ಹೊಂದಿದ್ದ ಕೊಟ್ಟೂರು ಪನ್ನೆರೆಡು ಮತ್ತು ಕೊಟ್ಟೂರು ಸೀಮೆ ಎಂದೇ ಹೆಸರಾಗಿ ಆಡಳಿತ, ವ್ಯಾಪಾರ ಕೇಂದ್ರವಾಗಿತ್ತು ಎಂದು ಶಾಸನಗಳು ತಿಳಿಸುತ್ತವೆ.
ಹರಪ್ಪನಹಳ್ಳಿ ರಂಗಪ್ಪ ನಾಯಕ ಇಲ್ಲಿ ಹಿರೇಮಠ ಕಟ್ಟಿಸಿದ್ದು. ವೈರಿಗಳ ಉಪಟಳ ಹೆಚ್ಚಾಗಿದ್ದ ಕಾಲದಲ್ಲಿ ತನ್ನ ಆಡಳಿತವನ್ನು ಆತ ಕೊಟ್ಟೂರೇಶ್ವರ ಸ್ವಾಮಿಗೆ ವಹಿಸಿಕೊಟ್ಟಿದ್ದ ಎನ್ನಲಾಗಿದೆ.
ವೀರಭದ್ರ ದೇವರ ಗುಡಿ ಆವರಣವೇ ಈಗ ಹಿರೇಮಠವಾಗಿ ಮಾರ್ಪಾಡಾಗಿದೆ. ಇಲ್ಲೇ ಕೊಟ್ಟೂರೇಶ್ವರರು ದರ್ಬಾರ್ ನಡೆಸುತ್ತಿದ್ದರು ಎಂಬ ಪ್ರತೀತಿ ಇದೆ. ಶ್ರೀಸ್ವಾಮಿಯ ಭವ್ಯ ಮಠವಾದ ಗಚ್ಚಿನ ಮಠವನ್ನು ಏಕ ಶಿಲೆಯಲ್ಲಿ ಶಿಲ್ಪಿಗಳು ಸುಂದರವಾಗಿ ಕೆತ್ತಿದ್ದಾರೆ. ಕೊಟ್ಟೂರೇಶ್ವರರು ಇಲ್ಲಿ ಯೋಗ ಸಮಾಧಿ ಹೊಂದಿರುವುದರಿಂದ ಈ ಮಠ ಜೀವಂತ ಯೋಗ ಸಮಾಧಿ ಎನಿಸಿಕೊಂಡಿದೆ.
ಅಕ್ಬರ್ ಬಾದಶಾಹ ಶ್ರೀಸ್ವಾಮಿಯ ಮಹಿಮೆಗೆ ಮಾರು ಹೋಗಿ ಅರ್ಪಿಸಿದ ಅಮೂಲ್ಯ ಮಂಚ ಈಗಲೂ ಗಚ್ಚಿನ ಮಠದಲ್ಲಿ ನೋಡಬಹುದಾಗಿದೆ.
ತೊಟ್ಟಿಲುಮಠ: ನಂಬಿಯಕ್ಕ ಎಂಬ ಶಿವಭಕ್ತೆ ತೊಟ್ಟಿಲು ಮಠದಲ್ಲಿ ವಾಸವಾಗಿದ್ದಳು. ಮಕ್ಕಳಿಲ್ಲದ ಈಕೆ ಕೊಟ್ಟೂರೇಶ್ವರ ಸ್ವಾಮಿಯನ್ನು ಸಾಕಿ ಸಲಹುತ್ತ ಇಲ್ಲಿನ ತೊಟ್ಟಲಿನ್ನು ತೂಗಿದ್ದಳು. ನಂತರದ ದಿನಗಳಲ್ಲಿ ಬಾಲಕ ಕೊಟ್ಟೂರೇಶ್ವರ ಸ್ವಾಮಿ ಪವಾಡ ಪುರುಷನಾಗಿ ಮೆರೆದ ಕಾರಣಕ್ಕಾಗಿ ಇದು ತೊಟ್ಟಿಲು ಮಠವಾಗಿದೆ. ಇಂದಿಗೂ ಸಂತಾನ ಭಾಗ್ಯ ಅಪೇಕ್ಷಿಸಿ ಭಕ್ತರು ತೊಟ್ಟಿಲು ಮಠಕ್ಕೆ ನಡೆದುಕೊಳ್ಳುತ್ತಾರೆ.
ಮಾಘ ಬಹುಳ ದಶಮಿಯ ಮೂಲಾ ನಕ್ಷತ್ರ ದಿನವಾದ ಮಾ. 6ರ ಬುಧವಾರ ಸಂಜೆ ರಥೋತ್ಸವ ನಡೆಯಲಿದೆ. ಶ್ರೀಸ್ವಾಮಿಯ ರಥ ಸುಮಾರು 100 ಅಡಿ ಎತ್ತರವಿದ್ದು, ಈ ಪ್ರಮಾಣದ ದೊಡ್ಡ ರಥವನ್ನು ಇಲ್ಲಿನ ದೇವಸ್ಥಾನ ಬಳಗ ಮತ್ತು ಆಯಗಾರರು ಸುಂದರವಾಗಿ ಸಿದ್ಧಗೊಳಿಸಿದ್ದಾರೆ.
ಈಗಾಗಲೇ ಸ್ವಾಮಿಯ ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement