ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮುಗೀತು ಬಹಿರಂಗ: ಇನ್ನೇನಿದ್ದರೂ ಅಂತರಂಗ

Lingaraj Badiger
Updated On : 6 Mar 2013, 11:34 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 5
ಬಳ್ಳಾರಿ ಎಂದಾಕ್ಷಣ ಅದೇನೋ ಗೊಂದಲ, ವಿವಾದ. ಹೇಳಿ ಕೇಳಿ ಚುನಾವಣೆ ಎಂದರೆ ಇಡೀ ರಾಜ್ಯದ ಚಿತ್ತ ಬಳ್ಳಾರಿ ಚುನಾವಣೆಯತ್ತ ಇರುತ್ತದೆ. ಕುರುಡು ಕಾಂಚಾಣದ ಕರಾಮತ್ತು ಇಡೀ ರಾಜ್ಯದ ಗಮನ ಸೆಳೆದಿದೆ. ಈಗ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತ ಬೇಟೆ, ಮತದಾರನ ಓಲೈಕೆ ಹೇಗೆ ನಡೆಯುತ್ತದೆ ಎನ್ನುವುದೇ ಕುತೂಹಲ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಹಿರಂಗವಾಗಿ ಕೈ ಮುಗಿದು ಪ್ರಚಾರ ಮಾಡಿದರೆ, ಮುಂದಿನ ಎರಡು ದಿನಗಳ ಅವಧಿಯಲ್ಲಿ ಕೈಯಲ್ಲಿಟ್ಟು ಪ್ರಚಾರ ಮಾಡುವ ಕಾರ್ಯ ಚಾಲ್ತಿಯಲ್ಲಿರುತ್ತಿತ್ತು. ಆದರೆ ಈ ಬಾರಿ ಏರ್ಪಡಿಸಿರುವ ಬಂದೋಬಸ್ತ್ ಚುನಾವಣೆ ಇದಕ್ಕೆ ಅವಕಾಶ ನೀಡುತ್ತಾ ಎಂಬ ಕುತೂಹಲ ಎಲ್ಲರಿಗೂ ಇದೆ.
ಧೂಳು ಹಿಡಿದಿದ್ದ ಕಾಯ್ದೆಗಳು ಜಾರಿ: ಚುನಾವಣೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ನಿಯಮಗಳನ್ನು ಪಕ್ಷಗಳು ಪಾಲನೆ ಮಾಡುತ್ತಿದ್ದವು. ಪ್ರತಿಬಾರಿ ಚುನಾವಣೆಯಲ್ಲಿ ನಡೆಯುತ್ತಿದ್ದ ಗೊಂದಲ ಗಲಾಟೆಗಳಿಗೆ ತೆರೆ ಎಳೆಯಬೇಕು ಎಂಬ ಕಾರಣಕ್ಕಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ನಿಯಮಾವಳಿ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಎಸ್ಪಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ್ದು, ಸಹಜವಾಗಿಯೇ ರಾಜಕೀಯ ಪಕ್ಷಗಳಲ್ಲಿ, ಅಭ್ಯರ್ಥಿಗಳು ಭೀತಿಗೊಳ್ಳಲು ಕಾರಣವಾಗಿತ್ತು. ಮಿತಿ ಮೀರಿ ನಡೆದಲ್ಲಿ ಎಲ್ಲಿ ಸಮಸ್ಯೆ ಎದುರಿಸಬೇಕಾಗುತ್ತೋ ಎಂಬ ಭಯದಿಂದ ಯಾರೊಬ್ಬರೂ ಹದ್ದುಮೀರಿ ವರ್ತಿಸುವುದಕ್ಕೆ ಹೋಗಲಿಲ್ಲ.
ಭೀತಿ ಉಂಟು ಮಾಡಿದ ದಾಳಿ: ಜಿಲ್ಲಾಡಳಿತದ ಭೀತಿ ಕೇವಲ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಸೀಮಿತವಾಗರಲಿಲ್ಲ, ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾದವರಿಗೆ ಕಾನೂನಿನಲ್ಲಿ ಶಿಕ್ಷೆ ಉಂಟು ಎಂಬ ಸುತ್ತೋಲೆಯು ಮತದಾರರಲ್ಲೂ ಭಯ ಹುಟ್ಟಿಸಿದೆ.
ಇನ್ನು ಮುಂಜಾಗ್ರತಾ ಕ್ರಮವಾಗಿ 4ನೇ ವಾರ್ಡ್‌ನ ಬಿಎಸ್ಸಾರ್ ಪಕ್ಷದ ಅಭ್ಯರ್ಥಿ ಮಹಮ್ಮದ್ ಜಮೀದ್ ಸೇರಿದಂತೆ ಮೂವರ ಬಂಧನ ಪ್ರಕರಣಗಳು, ಊಟ ಹಂಚಿದರೂ ಚುನಾವಣಾಧಿಕಾರಿಗಳು ದಾಳಿ ಮಾಡಿದ ಪ್ರಸಂಗಗಳು, ಕೊಟ್ಟೂರಿನಲ್ಲಿ ಬಿಎಸ್ಸಾರ್‌ನ ಐದು ವಾಹನಗಳನ್ನು ವಶಪಡಿಸಿಕೊಂಡಿದ್ದು, ಬಿಎಸ್ಸಾರ್ ಪಾರ್ಟಿ ಹೆಸರು ಹಾಗೂ ರಾಮುಲು ಭಾವಚಿತ್ರ ಉಳ್ಳ ಗೋಡೆ ಗಡಿಯಾರಗಳಿದ್ದ ಮಿನಿಲಾರಿಗಳನ್ನು ಸೀಜ್ ಮಾಡಿರುವ ಪ್ರಕರಣಗಳು ಭದ್ರತೆಗೆ ಹಿಡಿದ ಕೈಗನ್ನಡಿಯಾಗಿವೆ.
ಕತ್ತಲ ರಾತ್ರಿ ಪರಿಣಾಮ ಬೀರಬಲ್ಲದೇ?: ಮಾ. 5ರಂದು ಬೆಳಗ್ಗೆ 7 ಗಂಟೆಗೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದರಿಂದ ಅಭ್ಯರ್ಥಿಗಳು ಬೆಳಗ್ಗೆಯಿಂದ ರಾತ್ರಿವರೆಗೆ ಪ್ರಚಾರ ಮಾಡಿದರು.
ಈ ಬಾರಿ ಕುರುಡು ಕಾಂಚಾಣದ ಕರಾಮತ್ತು ಕಡಿಮೆಯಾಗುತ್ತದೆ ಎಂಬ ಮಾತು ಇದ್ದರೂ, ರಾಜಕೀಯ ಪಕ್ಷಗಳು ಹೇಗಾದರೂ ಮಾಡಿ, ಮತದಾರರನ್ನು ಒಲಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ಆಮಿಷವೊಡ್ಡಿ ಚುನಾವಣಾಧಿಕಾರಿಗಳ ಕೆಂಗಣ್ಣಿಗೆ ಬೀಳುತ್ತಾರೋ ಎಂಬುದನ್ನು ಮತದಾನದ ದಿನದವರೆಗೆ ಕಾದುನೋಡಬೇಕಿದೆ. ಇಂತಹ ಭೀತಿ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ. ಜತೆಗೆ ಕತ್ತಲ ರಾತ್ರಿ ಕರಾಮತ್ತು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಈಗಾಗಲೇ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪ್ರತಿ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮತದಾನದವರೆಗೂ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಬಂಧಿಸಿದರೂ ಆಶ್ಚರ್ಯಪಡಬೇಕಿಲ್ಲ.
 ಕತ್ತಲ ರಾತ್ರಿ ಕರಾಮತ್ತಿಗೆ ಗಮ್ಮತ್ತು ತೋರಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ವಾಮ ಮಾರ್ಗದಲ್ಲಿ ಅಭ್ಯಥಿಗಳೇನಾದರೂ ಮತದಾರರಿಗೆ ಆಮಿಷವೊಡ್ಡುತ್ತಾರೋ ನೋಡಬೇಕು.  ಪಕ್ಷಗಳು ತಮ್ಮ ಕರಾಮತ್ತನ್ನು ಸ್ವಲ್ಪವಾದರೂ ತೋರಿಸದೆ ಇರಲಾರವು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮನೆ ಮಾಡಿದ ಕುತೂಹಲ...
ರಿಪ್ಲಬಿಕ್ ಆಫ್ ಬಳ್ಳಾರಿ ಎಂದು ಲೋಕಾಯುಕ್ತ ವರದಿಯ  ಅಂಶ ಎಲ್ಲೆಡೆ ಹರಡಿ, ಬಳ್ಳಾರಿ ಒಂದು ರೀತಿ ರಿಪಬ್ಲಿಕ್ ಜಿಲ್ಲೆ ಎಂದು ಕರೆಸಿಕೊಂಡಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದರಿಂದ ಈ ಬಾರಿ ಚುನಾವಣೆಯ ಯಾವ ರೀತಿ ನಡೆಯುತ್ತದೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲಿ ಮನೆ ಮಾಡಿದೆ. ಇದುವರೆಗಿನ ಚುನಾವಣೆ ಎಂದರೆ ಪ್ರಚಾರದ ಸಂದರ್ಭದಲ್ಲಿ ಗೊಂದಲಗಳು ಸಹಜವಾಗಿರುತ್ತಿದ್ದವು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ನಾಮಪತ್ರ ಸಲ್ಲಿಸುವಾಗ ಅಷ್ಟು ಅಬ್ಬರ,  3-4 ದಿನಗಳಿಂದ ನಡೆದ ಚುನಾವಣಾ ಪ್ರಚಾರದಲ್ಲಿ ಅಂತಹ ಗೊಂದಲ ಕಾಣಲಿಲ್ಲ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement