ಶಾಂತಿಯುತ ಮತದಾನ: ಜಿಲ್ಲಾಧಿಕಾರಿ ವಿಶ್ವಾಸ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 5
ಶೇ. 99ರಷ್ಟು ಭರವಸೆ ನೀಡುತ್ತೇವೆ, ಚುನಾವಣೆಯಲ್ಲಿ ಯಾವುದೇ ಘಟನೆಗಳು ಆಗದೆ, ಶಾಂತಿಯುತವಾಗಿ ಮತದಾನ ನಡೆಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ, ಭಯದ ವಾತಾವರಣ ಇಲ್ಲದೆ ಶಾಂತಿಯುತ ಚುನಾವಣೆ ನಡೆಯುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಂತಿಯುತ ಮತದಾನಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಮಾ. 6 ಮತ್ತು 7ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದರು.
ಪ್ಯಾರಾ ಮಿಲಿಟರಿ ಪೋರ್ಸ್ಗೆ ಬೇಡಿಕೆ ಸಲ್ಲಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ತೋರಣಗಲ್ಲಿನಲ್ಲಿರುವ ಸಿಐಎಸ್ಎಫ್ ಬೆಟಾಲಿಯನ್ನೊಂದಿಗೆ ಮಾತುಕತೆ ನಡೆಸಲಾಗಿದ್ದು, ಅಗತ್ಯ ಬಿದ್ದರೆ 500 ಸಿಬ್ಬಂದಿ ನಿಯೋಜಿಸಲಾಗುತ್ತದೆ. ಜಿಲ್ಲೆಯಲ್ಲಿ 620 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಹೇಳದೆ, ಕ್ರಿಟಿಕಲ್ ಮತಗಟ್ಟೆಗಳೆಂದು ಮಾತ್ರ ಗುರುತಿಸಲಾಗಿದೆ. ಜಿಲ್ಲೆಯಲ್ಲಿ 29 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ 1, ತಾಲೂಕು ಮಟ್ಟದಲ್ಲಿ 8 ಎಂಸಿಸಿ ತಂಡಗಳು ಕಾರ್ಯನಿರ್ವಹಿಸಿವೆ. ಮಾ. 4ರಂದು ಹೆಚ್ಚುವರಿಯಾಗಿ 11 ಎಂಸಿಸಿ ತಂಡಗಳನ್ನು ರಚನೆ ಮಾಡಲಾಗಿದೆ. 52 ಸೆಕ್ಟರ್ ಆಫೀಸರ್ಸ್ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
102 ಪ್ರಕರಣ ದಾಖಲು: ಮಾದರಿ ಚುನಾವಣೆ ನೀತಿ ಸಂಹಿತೆಯಡಿ 15, ಅಬಕಾರಿ ಕಾಯ್ದೆಯಡಿ 39, ಕಾನೂನು ಸುವ್ಯವಸ್ಥೆಯಡಿ 48 ಪ್ರಕರಣಗಳು ಸೇರಿದಂತೆ 102 ಪ್ರಕರಣಗಳನ್ನು ವಿವಿಧ ಪಕ್ಷಗಳು, ಅಭ್ಯರ್ಥಿಗಳ ಮೇಲೆ ದಾಖಲಿಸಲಾಗಿದೆ. ಗೋಡೆ ಬರಹ ಬರೆದಿರುವ ಬಗ್ಗೆ ಕಾಂಗ್ರೆಸ್, ಬಿಎಸ್ಸಾರ್ ಮೇಲೆ, ಊಟ ಹಾಕಿರುವ ಬಗ್ಗೆ ಬಿಎಸ್ಸಾರ್, ಜೆಡಿಎಸ್ ಮೇಲೆ, ವಾಹನ ಜಪ್ತಿ ಕುರಿತಾಗಿ ಬಿಎಸ್ಸಾರ್ ಮೇಲೆ ದೂರು ದಾಖಲಾಗಿವೆ. ಜೆಸಿಬಿಯಿಂದ ಕೆಲಸ ನಿರ್ವಹಿಸಿದ ಕಾಂಗ್ರೆಸ್ ವಿರುದ್ಧ, ಬೋರ್ವೆಲ್ ಕೊರೆಯಿಸಿದ ಆರೋಪದಡಿ ಜೆಡಿಎಸ್ ವಿರುದ್ಧ ಪ್ರಕರಣ. ಬಿಎಸ್ಸಾರ್ ಪಕ್ಷ ಪರವಾನಿಗೆ ಇಲ್ಲದೆ ಐದು ವಾಹನಗಳ ಬಳಕೆ ಮಾಡಿದ್ದರಿಂದ ಕೊಟ್ಟೂರಿನಲ್ಲಿ ಐದು ವಾಹನ ಹಾಗೂ ಕೂಡ್ಲಿಗಿಯಲ್ಲಿ ಐದು ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
2 ಸಾವಿರ ಸಿಬ್ಬಂದಿ ನಿಯೋಜನೆ: ಎಸ್ಪಿ ಡಾ. ಚಂದ್ರಗುಪ್ತ ಮಾತನಾಡಿ, ಚುನಾವಣೆ ಭದ್ರತೆ ಹಿನ್ನೆಲೆಯಲ್ಲಿ 47 ಚೆಕ್ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗೆ 10 ಕೆಎಸ್ಆರ್ಪಿ, 10 ಡಿಎಆರ್, ಗೃಹ ರಕ್ಷಕದಳ ಸೇರಿದಂತೆ ಒಟ್ಟು 2 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ 3 ಭದ್ರತಾ ಸಿಬ್ಬಂದಿ, ಕ್ರಿಟಿಕಲ್ ಮತಗಟ್ಟೆಗಳಲ್ಲಿ 7ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. 88 ಮೊಬೈಲ್ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ 3 ಸಿಬ್ಬಂದಿ ಇರುತ್ತಾರೆ. 1,286 ಶಸಾಸ್ತ್ರಗಳನ್ನು ಡೆಪಾಜಿಟ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
47 ಜನರ ಬಂಧನ: ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ರೌಡಿಶೀಟರ್ ಮೇಲೆ, ಹೊಸದಾಗಿ ಗಲಭೆ ಸೃಷ್ಟಿಸುವ 47 ಜನರ ಬಂಧನ ಮಾಡಲಾಗಿತ್ತು. ಆದರೆ ಕೆಲವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ಹೆಚ್ಚಿನ ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ವತಿಯಿಂದ 6 ಅಬಕಾರಿ ಕೇಸುಗಳನ್ನು ದಾಖಲಿಸಿ, ರು. 36 ಸಾವಿರ ಮೌಲ್ಯದ ಲಿಕ್ಕರ್ ಸೀಜ್ ಮಾಡಿ, 7 ಜನರನ್ನು ಬಂಧಿಸಲಾಗಿದೆ. ಅಬಕಾರಿ ಇಲಾಖೆ ದಾಳಿ ಮಾಡಿ, ರು. 31 ಸಾವಿರ ಮೌಲ್ಯದ ಲಿಕ್ಕರ್ ವಶಪಡಿಸಿಕೊಂಡಿದೆ ಎಂದು ತಿಳಿಸಿದರು.
ವೀಕ್ಷಕರಿಂದ ಡಿಸಿ, ಎಸ್ಪಿಗೆ ಶಹಬ್ಬಾಸ್ಗಿರಿ
ಮಹಾನಗರ ಪಾಲಿಕೆಗೆ ಚುನಾವಣೆ ವೀಕ್ಷಕರಾಗಿ ಬಂದಿರುವ ಮಹಮ್ಮದ್ ಸಲಾವುದ್ದೀನ್ ಅವರು ಡಿಸಿ ಹಾಗೂ ಎಸ್ಪಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಂತಿಯುತವಾಗಿ ಮತದಾನಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಡಿಸಿ ಮತ್ತು ಎಸ್ಪಿ ಮಾಡಿದ್ದಾರೆ. ನಿಜಕ್ಕೂ ಅವರಿಗೆ ಅಭಿನಂದನೆ ತಿಳಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮತ್ತೋರ್ವ ಚುನಾವಣಾ ವೀಕ್ಷಕ ಚಿಕ್ಕಮುನಿಯಪ್ಪ ಇದ್ದರು.