ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಡಿಸಿಯಿಂದ ಬಿಎಸ್ಸಾರ್ ಟಾರ್ಗೆಟ್: ಆರೋಪ

Parashurama
Updated On : 8 Mar 2013, 11:20 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 7
ಬಿಎಸ್‌ಆರ್ ಪಾರ್ಟಿಯನ್ನು ಜಿಲ್ಲಾಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ. ತಮ್ಮನ್ನು ಟಾರ್ಗೆಟ್ ಮಾಡಿದರೆ 100 ಮಂದಿಗೆ ಒಳ್ಳೆಯದು ಮಾಡುತ್ತಿದ್ದೇನೆಂಬ ಮೈಂಡ್ ಸೆಟ್ ಜಿಲ್ಲಾಧಿಕಾರಿಗೆ ಇದೆ ಎಂದು ಬಿಎಸ್‌ಆರ್ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.
34ನೇ ವಾರ್ಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲಾಡಳಿತ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ. ಪಕ್ಷಪಾತ ಧೋರಣೆ ತಾಳುತ್ತಿದೆ. ಮತದಾರರ ಪಟ್ಟಿಯಲ್ಲಿ ಎಂಪಿ ಶಾಂತಾ ಅವರ ಹೆಸರಿನ ಬದಲಾಗಿ ತಿಪ್ಪಮ್ಮ ಎಂದಿದೆ. ಸಂಸದೆ ಜೆ. ಶಾಂತಾ ಅವರ ಹೆಸರೇ ಇಲ್ಲವಾಗಿದೆ. ಜಿಲ್ಲಾಡಳಿತ ಬೇಜವಾಬ್ದಾರಿಯಿಂದ ವರ್ತಿಸುವ ಮೂಲಕ ಶಾಂತಾ ಅವರ ಹೆಸರನ್ನು ತಿಪ್ಪಮ್ಮ ಎಂದು ಮಾಡಿದೆ ಎಂದು ಆರೋಪಿಸಿದರು.
ಎಂಪಿ ಶಾಂತಾ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರ ಹೆಸರನ್ನು ಬದಲಾವಣೆ ಮಾಡಿದ್ದಾರೆ. ನಾಲ್ಕೈದು ದಿನದ ಹಿಂದೆ ಈ ಮಾಹಿತಿ ಗೊತ್ತಾಗಿದೆ ಎಂದಾಗ, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಸಂಬಂಧ ಪಟ್ಟ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಮುಂದಿನ ಚುನಾವಣೆಗೆ ದಿಕ್ಸೂಚಿ: ಬಿಎಸ್‌ಆರ್ ಪ್ರಥಮ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ರಾಜಕೀಯವಾಗಿ ಈ ಚುನಾವಣೆ ಶಕ್ತಿ ತುಂಬಲಿದೆ. ಬಿಎಸ್‌ಆರ್ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ಬಿಎಸ್‌ಆರ್ 12 ಜಿಲ್ಲೆಗಳಲ್ಲಿ ಬಲಿಷ್ಟವಾಗಿದ್ದು, ಶೇ. 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದೇವೆ. ಕಳೆದ 10 ವರ್ಷಗಳಿಂದ ಜನರು ಆಶೀರ್ವಾದ ಮಾಡುತ್ತಿದ್ದಾರೆ.
ಈ ಬಾರಿಯು ಆಶೀರ್ವಾದ ಮಾಡುವ ನಂಬಿಕೆ ತಮಗಿದೆ. ಮುಂಬರುವ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ. ಕಳೆದ ವರ್ಷದಿಂದ  ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ, ಜನರ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದರು.  
ಗೌರಿಬಿದನೂರಿನಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಶ್ರೀರಾಮುಲು ಹೇಳಿದರು.
ಡಿಸಿಯಿಂದ ತೊಂದರೆ: ಬಳ್ಳಾರಿ ಸಂಸದೆ ಜೆ. ಶಾಂತಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಲೋಕಸಭಾ ಸದಸ್ಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ತಮ್ಮ ಹೆಸರನ್ನು ತಿಪ್ಪಮ್ಮ ಎಂದು ಗಂಡನ ಹೆಸರನ್ನು ಮಹಾಂತೇಶ್ ಎಂದು ಮುದ್ರಿಸಲಾಗಿದೆ. ಆದರೆ, ಪೋಟೋ ಮಾತ್ರ ತಮ್ಮದಿದೆ. ಕಳೆದ ಹಲವು ವರ್ಷಗಳಿಂದ ಮತದಾನ ಮಾಡಿಕೊಂಡು ಬಂದಿದ್ದೇನೆ. ಕಾನೂನು ಮತ್ತು ಡಿಸಿ ಅವರು ಬೇಕಂತಲೇ ತೊಂದರೆ ಕೊಡುತ್ತಿದ್ದಾರೆ. ನನ್ನ ವಿರುದ್ಧ ದೌರ್ಜನ್ಯದ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
ನಾನು ಮನೆ ಆವರಣದಲ್ಲಿ ಕುಳಿತಿರುವಾಗ ವೀಡಿಯೋ ತೆಗೆದುಕೊಂಡು ಹೋಗುತ್ತಾರೆ. ನನಗೆ ಖಾಸಗಿ ಬದುಕು ಇಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಒಂದನೇ ವಾರ್ಡಿನಲ್ಲಿ ಮತ ಇದೆ-ಡಿಸಿ: ಈ ಕುರಿತು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಸಂಪರ್ಕಿಸಿದಾಗ, ಸಂಸದೆ ಜೆ. ಶಾಂತಾ ಅವರ ಮತವು ಒಂದನೇ ವಾರ್ಡಿನಲ್ಲಿದೆ. ಅಲ್ಲಿ ಮತಚಲಾಯಿಸಬಹುದು. ಈ ಬಗ್ಗೆ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಎಂಪಿ ಅವರು ಮತವು ಒಂದನೇ ವಾರ್ಡಿನ 15ನೇ ಸೀರಿಯಲ್ ನಂಬರ್‌ನಲ್ಲಿದೆ. ಆದರೂ, ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ನೋವು: ಮಹಾನಗರ ಪಾಲಿಕೆಯ 35ನೇ ವಾರ್ಡಿನಲ್ಲಿ ಕೆಎಂಎಫ್ ಅಧ್ಯಕ್ಷ, ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಪತ್ನಿ ವಿಜಯಾ ಅವರೊಂದಿಗೆ ಹವಂಭಾವಿ ಪ್ರದೇಶದಲ್ಲಿ ಮತಚಲಾಯಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜನಾರ್ದನ ರೆಡ್ಡಿ ಇಲ್ಲದೆ ಚುನಾವಣೆ ನಡೆಸುತ್ತಿರುವುದು ನೋವಾಗಿದೆ. ಆದರೆ ಕಳೆದ ಬಾರಿಯಷ್ಟು ಸ್ಥಾನಗಳು ಪಡೆಯದಿದ್ದರೂ, ಈ ಬಾರಿ ಪಾಲಿಕೆಯ 25ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಬಿಎಸ್‌ಆರ್ ಗೆಲ್ಲಲಿದ್ದು, ಕಳೆದ 10 ವರ್ಷದಿಂದ ಜನರು ಆಶೀರ್ವಾದ ಮಾಡಿದ್ದು, ಈ ಬಾರಿಯು ಆಶೀರ್ವಾದ ಮಾಡಲಿದ್ದಾರೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಜನರ ಮನ ತಿಳಿದುಕೊಂಡಿದ್ದೇವೆ. ನಮ್ಮ ಅಭಿವೃದ್ಧಿ ಕಾಮಗಾರಿಗಳೇ ನಮಗೆ ಶ್ರೀರಕ್ಷೆ ಎಂದು ತಿಳಿಸಿದರು. ಬಹುತೇಕ ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳು ಪಕ್ಷದ ಕೈವಶವಾಗಲಿವೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments