ಶ್ರೀರಾಮುಲು, ರೆಡ್ಡಿ ಸಿಬಿಐ ವಿಚಾರಣೆಯಾಗಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 9
ಆಂಧ್ರಪ್ರದೇಶದಲ್ಲಿ ಗಣಿ ಗುತ್ತಿಗೆ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸಿರುವ ಜನಾರ್ದನ ರೆಡ್ಡಿ ಅವರ ಆಸ್ತಿಯನ್ನು ಪತ್ತೆ ಹಚ್ಚಬೇಕಾದರೆ ಓಎಂಸಿ ಸಂಬಂಧ ಪಟ್ಟಂತೆ ಶ್ರೀರಾಮುಲು, ಕರುಣಾಕರ ರೆಡ್ಡಿ, ಲಕ್ಷ್ಮಿ ಅರುಣಾ, ಪರಮೇಶ್ವರ ರೆಡ್ಡಿ, ಶಾಸಕ ಸುರೇಶ್ಬಾಬು ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದರೆ, ಪಕ್ಕಾ ಮಾಹಿತಿ ಸಿಗುತ್ತದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ತಿಳಿಸಿದ್ದಾರೆ.
ನಗರದ ಜರ್ನಲಿಸ್ಟ್ ಗಿಲ್ಡ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಆಸ್ತಿಯ ಮೌಲ್ಯವನ್ನು ಪತ್ತೆ ಹಚ್ಚಬೇಕಾದರೆ ಓಎಂಸಿಯ ಎಲ್ಲ ನಿರ್ದೇಶಕರನ್ನು, ಇದಕ್ಕೆ ಸಂಬಂಧ ಪಟ್ಟ ಇತರರನ್ನು ಸಿಬಿಐ ವಿಚಾರಣೆಗೆ ಒಳಪಡಿಸಬೇಕು. ಅಲ್ಲದೆ, ಆಗ ಕಾರ್ಯನಿರ್ವಹಿಸುತ್ತಿದ್ದ ಗಣಿ ಇಲಾಖೆ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ 2011ರಲ್ಲಿ ತಮ್ಮ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿಯೂ ಅವರನ್ನು ವಿಚಾರಣೆ ನಡೆಸಬೇಕು ಎಂದು ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಅಧಿಕಾರಿಗಳಿಗೆ ಸರ್ಕಾರ ಬೇರೆಡೆಗೆ ಪೋಸ್ಟಿಂಗ್ ಕೊಡುತ್ತಿರುವ ವಿಷಯವನ್ನು ಗಮನಿಸಿದರೆ, ರಾಜ್ಯ ಸರ್ಕಾರದ ಮೇಲೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರ ಹಿಡಿತ ಇನ್ನೂ ಇದೆ ಎಂಬುದು ತಿಳಿಯುತ್ತದೆ. ತಾವು ಲೋಕಾಯುಕ್ತರಿಗೆ ನೀಡಿರುವ ದೂರುಗಳು ಯಾವ ಹಂತದಲ್ಲಿವೆ ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ಆರ್ಟಿಐನಲ್ಲಿ ಮಾಹಿತಿ ಕೇಳಲಾಗಿದ್ದು, ದೂರಿನ ಹಂತಗಳ ಬಗ್ಗೆ ತಿಳಿದ ನಂತರ ಲೋಕಾಯುಕ್ತರಿಗೆ ತಮ್ಮ ದೂರು ಕುರಿತಾಗಿ ತನಿಖೆ ಮಾಡಲು ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟಪಾಲ್ ಗಣೇಶ್ ಸಹೋದರ, ಟಪಾಲ್ ಏಕಂಬರಂ ಅವರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.