ಲೋಕಾ ಬಲೆಗೆ ಗ್ರಾಮ ಲೆಕ್ಕಿಗ
ಬಳ್ಳಾರಿ: ಖಾತೆ ಬದಲಾವಣೆಗೆ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೂಳೂರು ಗ್ರಾಮದ ಗಾದಿಲಿಂಗಪ್ಪ ಎಂಬುವರು ಖಾತೆ ಬದಲಾವಣೆ ಮಾಡಿಕೊಡುವಂತೆ ಕೇಳಿದಾಗ ರು. 12 ಸಾವಿರ ಲಂಚ ಕೇಳಿದ್ದು, ಅದರಲ್ಲಿ ರು. 6 ಸಾವಿರ ನೀಡಿದರೂ, ಖಾತೆ ಬದಲಾವಣೆ ಮಾಡದೆ 5 ತಿಂಗಳಿಂದ ಸತಾಯಿಸುತ್ತಿದ್ದರು. ಈ ಕುರಿತು ಗಾದಿಲಿಂಗಪ್ಪ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ತಾಳೂರು ಗ್ರಾಮದಲ್ಲಿ ಬಸವರಾಜ್ ರು. 6 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಹೆಬ್ಬಾಳ್ ದಾಳಿ ಮಾಡಿ, ಬಂಧಿಸಿದ್ದಾರೆ.
ಕನ್ನಾಯಕನಕಟ್ಟೆ ಶಿವಣ್ಣ ನಿಧನ
ಕೂಡ್ಲಿಗಿ: ತಾಲೂಕಿನ ದಲಿತಪರ ಹೋರಾಟಗಾರ ಕನ್ನಾಯಕನಕಟ್ಟೆ ಶಿವಣ್ಣ (55) ಗುರುವಾರ ಬೆಳಗಿನ ಜಾವ ಕನ್ನನಾಯಕನಕಟ್ಟೆ ಗ್ರಾಮದಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧುಬಳಗ ಇದ್ದಾರೆ. ಮೂವತ್ತು ವರ್ಷಗಳಿಂದ ದಲಿತಪರ ಸಂಘಟನೆಯಲ್ಲಿ ತೊಡಗಿ ತಾಲೂಕಿನಲ್ಲಿ ಪರಿಚಿತರಾಗಿದ್ದರು. ಶಿವಣ್ಣ ನಿಧನಕ್ಕೆ ಪಪಂ ಸದಸ್ಯ ಎಸ್. ದುರುಗೇಶ್, ಜೆಡಿಎಸ್ ತಾಲೂಕಾಧ್ಯಕ್ಷ ಶಿವಣ್ಣ ಸಾಲುಮನಿ ಇತರರು ಶೋಕ ವ್ಯಕ್ತಪಡಿಸಿದ್ದಾರೆ.