ಎಸ್ಡಿಎಂಸಿ ನೇಮಕಕ್ಕೆ ಶಾಸಕರ ಶಿಫಾರಸು!
ಬಳ್ಳಾರಿ: ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳೀಗ ರಾಜಕೀಯ ತಾಣಗಳಾಗುತ್ತಿವೆ. ಇಂಥವರನ್ನೆ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನಾಗಿ ನೇಮಿಸಬೇಕೆಂದು ಸಿರುಗುಪ್ಪ ಬಿಜೆಪಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಖುದ್ದಾಗಿ ಶಿಕ್ಷಣ ಇಲಾಖೆಗೆ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಇಂತಹ ಲಾಬಿಗಳಿಂದಾಗಿ ಶಾಲಾ ವಾತಾವರಣ ಹದಗೆಡುತ್ತಿದೆ.
ಸಿರುಗುಪ್ಪ ತಾಲೂಕಿನ ಊಳೂರು ಸರ್ಕಾರಿ ಪ್ರಾಥಮಿಕ ಶಾಲೆ ಎಸ್ಡಿಎಂಸಿ ನೇಮಕ ಕುರಿತಾಗಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಜ. 29, 2013ರಂದು ಸಿರುಗುಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಫಾರಸು ಪತ್ರ ಬರೆದು, ಊಳೂರು ಶಾಲಾ ಸುಧಾರಣೆ ಸಮಿತಿಗೆ (ಎಸ್ಡಿಎಂಸಿ) ಆಯ್ಕೆ ಮಾಡಬೇಕಾದವರ ಹೆಸರುಗಳನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಎನ್. ಕವಿತಾ ಅಧ್ಯಕ್ಷರಾಗಬೇಕು, ದ್ಯಾವಮ್ಮ ಉಪಾಧ್ಯಕ್ಷರಾಗಿ, ಇಂತಹವರು ಸದಸ್ಯರಾಗಬೇಕೆಂದು ಶಿಫಾರಸು ಮಾಡಿದ್ದಾರೆ. ತಾವು ಹೆಸರಿಸಿದವರನ್ನೇ ಎಸ್ಡಿಎಂಸಿಗೆ ನೇಮಕ ಮಾಡಬೇಕೆಂದು ಆ ಪತ್ರದಲ್ಲಿ ಅವರು ಕೋರಿದ್ದಾರೆ.
ಮುಖ್ಯ ಶಿಕ್ಷಕರ ಮೇಲೆ ಒತ್ತಡ: ಸಿರುಗುಪ್ಪದ ಬಿಇಓ ಅದೇ ಶಿಫಾರಸು ಪತ್ರವನ್ನು ಊಳೂರು ಶಾಲೆಯ ಮುಖ್ಯ ಶಿಕ್ಷಕರಿಗೆ ಕಳುಹಿಸುವ ಮೂಲಕ ಒತ್ತಡ ಹೇರಿದ್ದಾರೆ. ಅಲ್ಲಿನ ಮುಖ್ಯಶಿಕ್ಷಕರು ಮೇಲಧಿಕಾರಿಗಳಿಗೆ ಹಾಗೂ ಶಾಸಕರಿಗೆ ಹೆದರಿ ಅವರು ಹೇಳಿದವರನ್ನೇ ಮಾ. 6ರಂದು ಎಸ್ಡಿಎಂಸಿ ಸದಸ್ಯರನ್ನು ನೇಮಕ ಮಾಡಿ, ಶಾಸಕ ಹಾಗೂ ಬಿಇಓಗೆ ವರದಿ ನೀಡಿದ್ದಾರೆ.
ನಿಯಮಕ್ಕಿಂತ ಶಿಫಾರಸು ದೊಡ್ಡದು: ಶಾಸಕರು ಶಿಫಾರಸು ಮಾಡಿರುವ ವನಜಾಕ್ಷಮ್ಮ, ವೆಂಕೋಬಪ್ಪ ಎಂಬುವರ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳಲ್ಲ ಎಂಬುದನ್ನು ಊಳೂರು ಶಾಲಾ ಮುಖ್ಯ ಶಿಕ್ಷಕರು ಬಿಇಓ ಗಮನಕ್ಕೆ ತಂದಿದ್ದಾರೆ. ನಿಯಮ ಬಿಟ್ಟು ಸಮಿತಿ ನೇಮಕ ಮಾಡಿದರೆ ಯಾರೂ ಪ್ರಶ್ನಿಸುವುದಿಲ್ಲ, ಆದರೆ ಶಾಸಕರ ಶಿಫಾರಸು ಮೀರಿದರೆ ಏನು ಕಾದಿರುತ್ತೋ ಎಂಬ ಭೀತಿಯಲ್ಲಿ, ಮೇಲಧಿಕಾರಿಗಳ ಒತ್ತಡದಿಂದ ಮುಖ್ಯಶಿಕ್ಷಕರು ಎಸ್ಡಿಎಂಸಿ ಸದಸ್ಯರನ್ನು ನೇಮಕ ಮಾಡಿದ್ದಾರೆ. ಆದರೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಲಾಬಿ: ರಾಜಕೀಯ ನಾಯಕರು, ಜನಪ್ರತಿನಿಧಿಗಳು ತಮ್ಮ ಬೆಂಬಲಿಗರ ಆಶೋತ್ತರಗಳನ್ನು ಈಡೇರಿಸಲು ಗುತ್ತಿಗೆ ಮತ್ತಿತರ ವಿಷಯದಲ್ಲಿ ಶಿಫಾರಸು, ಲಾಬಿ ಮಾಡುತ್ತಿದ್ದರು. ಇದೀಗ ಶಾಲಾ ಅಭಿವೃದ್ಧಿ ದೃಷ್ಟಿಯಿಂದ ರಚನೆಯಾದ ಎಸ್ಡಿಎಂಸಿ ನೇಮಕದಲ್ಲಿ ಶಿಫಾರಸು, ಲಾಬಿಗಳು ಶುರುವಾಗಿರುವುದು ದುರಂತ. ಇದರಿಂದಾಗಿ ಆಯಾ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಸಮಸ್ಯೆ ಎದುರಿಸಿ, ಪೋಷಕರೊಂದಿಗೆ ತಿಕ್ಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಎಸ್ಡಿಎಂಸಿ ವ್ಯವಸ್ಥೆಯಿಂದಲೇ ಶಾಲೆ ಅಭಿವೃದ್ಧಿ ಹಾಗೂ ಗುಣಾತ್ಮಕತೆಗೆ ಮಾರಕವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿವೆ.
-ಶಶಿಧರ ಮೇಟಿ