ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಾಲಿಕೆ ವಾಹನಗಳ ಮೇಲೆ ಜಿಪಿಎಸ್ ಕಣ್ಣು

Lingaraj Badiger
Updated On : 16 Mar 2013, 11:22 am

- ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 15

ಬಳ್ಳಾರಿಯಲ್ಲಿ ಗಣಿ ಅಕ್ರಮ ತಡೆಯಲು ಅದಿರು ಲಾರಿಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸೆಷನ್ ಸಿಸ್ಟಮ್) ಅಳವಡಿಸಿದ್ದಾಯ್ತು, ಇದೀಗ ಮಹಾನಗರ ಪಾಲಿಕೆ ತನ್ನ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮೂಲಕ ಪಾಲಿಕೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ.
ಈಗಾಗಲೇ 35 ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಹಾನಗರ ಪಾಲಿಕೆಯಲ್ಲಿ ಹಣದ ಸೋರಿಕೆ ತಪ್ಪಿಸಲು, ಸಿಬ್ಬಂದಿ ಕೊರತೆ ನೀಗಿಸಲು, ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯು ಲಕ್ಷಾಂತರ ರು. ವೆಚ್ಚದಲ್ಲಿ ಜಿಪಿಎಸ್ ಅಳವಡಿಸಲು ಮುಂದಾಗಿದೆ. ಇದರಿಂದಾಗಿ ವಾಹನಗಳ ಸಂಚಾರದ ಮೇಲೆ ಪಾಲಿಕೆ ಹದ್ದಿನ ಕಣ್ಣಿಟ್ಟಿದೆ.
ಜಿಪಿಎಸ್‌ನ್ನು ವೆಹಿಕಲ್ ಟ್ರಕಿಂಗ್ ಸಿಸ್ಟಮ್ ಎಂತಲೂ ಕರೆಯುತ್ತಾರೆ. ಪಾಲಿಕೆಯಲ್ಲಿ 40ಕ್ಕೂ ಹೆಚ್ಚು ವಾಹನಗಳಿದ್ದು, ಅವುಗಳ ಮೇಲೆ ನಿಗಾವಹಿಸಲು ಹತ್ತಾರು ಜನರು ಮೇಲುಸ್ತುವಾರಿ ಸಿಬ್ಬಂದಿಗಳು ಬೇಕಾಗುತ್ತದೆ. ಆದರೆ ಇಂತಹ ಸಿಬ್ಬಂದಿಗಳ ಕೆಲಸವನ್ನು ಜಿಪಿಎಸ್ ಸಿಸ್ಟಮ್‌ನ ಮೂಲಕ ಓರ್ವ ವ್ಯಕ್ತಿ ಮಾಡಬಹುದು. ಮಾತ್ರವಲ್ಲ, ಒಂದು ತಿಂಗಳವರೆಗೆ ವಾಹನಗಳ ಸಂಚಾರದ ಮಾಹಿತಿಯನ್ನು ಪಡೆಯಬಹುದು. ಇಂತಹ ವ್ಯವಸ್ಥೆಯಿಂದಾಗಿ ಪಾಲಿಕೆಯ ವಾಹನಗಳ ಸಂಚಾರದ ಮೇಲೆ ಶೇ. 100ರಷ್ಟು ನಿಗಾ ವಹಿಸಬಹುದು.
ಪಾರದರ್ಶಕತೆಗೆ ಮುಂದಾದ ಪಾಲಿಕೆ: ಅದಿರು ತುಂಬಿದ ಲಾರಿಗಳು ಅಕ್ರಮವಾಗಿ ಅದಿರು ಸಾಗಾಣಿಕೆಗೆ ಮುಂದಾಗಿದ್ದರಿಂದ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅದಿರು ಲಾರಿಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅಕ್ರಮ ಅದಿರು ಸಾಗಾಣಿಕೆಗೆ ಬ್ರೇಕ್ ಹಾಕಿತ್ತು. ಇದೀಗ ಪಾಲಿಕೆಯು ಇಲ್ಲಿನ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಪಾಲಿಕೆಯಲ್ಲಿ ಪಾರದರ್ಶಕತೆ ತರಲು ಹೊರಟಿದೆ. ಪಾಲಿಕೆಯಲ್ಲಿ 21 ಕಸ ಸಂಗ್ರಹದ ಆಟೋ ಟಿಪ್ಪರ್, 6 ರೆಫ್ಯೂಜ್ ಕಲೆಕ್ಟರ್, 2 ವಾಟರ್ ಟ್ಯಾಂಕ್, 2 ಜೆಸಿಬಿ, 6 ಡಂಪರ್ಸ್‌ಗಳು ಸೇರಿದಂತೆ 40ಕ್ಕೂ ಹೆಚ್ಚು ವಾನಹಗಳಿದ್ದು, ಇದೀಗ 35 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಪಾಲಿಕೆಯಲ್ಲಿ ಇದನ್ನು ಮಾನಿಟರಿಂಗ್ ಮಾಡುವ ಸಾಫ್ಟ್‌ವೇರ್ ಸಿಸ್ಟಮ್ ವ್ಯವಸ್ಥೆ ಪ್ರಗತಿಯ ಹಂತದಲ್ಲಿದೆ.
ಪಾರದರ್ಶಕತೆಗೆ ಜಿಪಿಎಸ್ ತಂತ್ರ: ಮಹಾನಗರ ಪಾಲಿಕೆಯಲ್ಲಿರುವ ಜೆಸಿಬಿಗಳನ್ನು ಸುಳ್ಳು ಮಾಹಿತಿ ನೀಡಿ ಬೇರೆ ಕಡೆ ಕೆಲಸ ಮಾಡುವ ಮೂಲಕ ಯಂತ್ರಗಳ ದುರ್ಬಳಕೆಯಾಗುತ್ತಿತ್ತು. ಇನ್ನು ಕಸ ಸಂಗ್ರಹಣೆ, ನೀರಿನ ಟ್ಯಾಂಕ್, ಡಂಪರ್ಸ್‌ಗಳು ಕೂಡ ಕೆಲವೊಮ್ಮೆ ಇಲ್ಲಿಂದ ಇಲ್ಲಿಗೆ ಸುತ್ತಾಡಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸುವುದು, ಕಸ ಸಂಗ್ರಹಣೆ ಮಾಡದಿದ್ದರೂ, ಕಸ ಸಂಗ್ರಹಣೆ ಮಾಡಿದ್ದೇವೆ ಎಂದು ಹೇಳುವುದು ಸೇರಿದಂತೆ ಇತರ ಸುಳ್ಳ ಮಾಹಿತಿ ನೀಡುವ ಅವಕಾಶಗಳು ಹೆಚ್ಚಾಗಿತ್ತು. ಇದು ಪಾಲಿಕೆಯ ಹಣದ ಸೋರಿಕೆಗೆ ಕಾರಣವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ವಾಹನಗಳ ಮೇಲೆ ನಿಗಾವಹಿಸಲು ಕೇವಲ 4 ಜನ ಸುಪರ್‌ವೈಜರ್‌ಗಳಿಂದ ಮಾನಿಟರಿಂಗ್ ಸಾಧ್ಯವಾಗುತ್ತಿರಲಿಲ್ಲ. ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕುವ ಉದ್ದೇಶದಿಂದಾಗಿ ಜಿಪಿಎಸ್ ಅಳವಡಿಕೆಗೆ ಮುಂದಾಗಿದೆ.
ಒಂದು ತಿಂಗಳ ಮಾಹಿತಿ ಲಭ್ಯ: ಜಿಪಿಎಸ್ ಅಂದರೆ ಗ್ಲೋಬಲ್ ಪೊಸೆಷನ್ ಸಿಸ್ಟಮ್ ಅಥವಾ ವೆಹಿಕಲ್ ಟ್ರಕಿಂಗ್ ಸಿಸ್ಟಮ್ ಎಂತಲೂ ಕರೆಯುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಪಾಲಿಕೆಯ ವಾಹನಗಳಿಗೆ ಜಿಪಿಎಸ್ ಅಳವಡಿಸಿರುತ್ತಾರೆ. ಈ ಸಂಬಂಧ ಸಾಫ್ಟ್‌ವೇರ್ ಮೂಲಕ ಪಾಲಿಕೆ ಕಚೇರಿಯಲ್ಲಿ ಒಂದು ಸಿಸ್ಟಮ್ ವ್ಯವಸ್ಥೆ ಮಾಡಿರುತ್ತಾರೆ, ಯಾವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆಯೋ ಆ ವಾಹನ ಎಲ್ಲಿದೆ, ಎಲ್ಲಿಗೆ ಹೋಗುತ್ತಿದೆ, ಅದರ ವೇಗವೆಷ್ಟು, ತಾವು ನಿಗದಿಪಡಿಸಿದ ವ್ಯಾಪ್ತಿ ಮೀರಿ ಹೋಗಿದೆಯೇ, ವಾಹನಗಳ ಖಾಸಗಿ ಹಾಗೂ ಅನಗತ್ಯ ಬಳಕೆಯಾಗುತ್ತಿದೆಯೇ, ಜೆಸಿಬಿಗಳು ಯಾವ ಕಾರ್ಯ ಮಾಡುತ್ತಿವೆ, ನಿಗದಿತ ಕೆಲಸ ಮಾಡುತ್ತಿದೆಯೇ ಎಂಬ ಪ್ರತಿಕ್ಷಣದ ಮಾಹಿತಿಯನ್ನು ಕಚೇರಿಯಲ್ಲಿ ಕುಳಿತೇ ವೀಕ್ಷಣೆ ಮಾಡಬಹುದು.
ಒಂದು ತಿಂಗಳಲ್ಲಿ ವಾಹನ ಸಂಚರಿಸಿದ ದೂರದ ಲೆಕ್ಕವನ್ನು ಪಡೆಯಬಹುದು. ಶೇ. 100ರಷ್ಟು ಮಾನಿಟರಿಂಗ್ ಮಾಡಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement