ಶೀಘ್ರದಲ್ಲೇ ನಗರ ಸಾರಿಗೆ ಆರಂಭ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 15
ಹೊಸಪೇಟೆ ನಗರ ಸಾರಿಗೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವಾನಂದ ಕಲ್ಲೂರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸಪೇಟೆ ನಗರ ವಾಸಿಗಳಿಗೆ ಉತ್ತಮ ಬಸ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸಪೇಟೆ-ಹಂಪಿ, ರೈಲು ನಿಲ್ದಾಣ-ಕಾರಿಗನೂರು, ಚಿತ್ತವಾಡ್ಗಿ-ಎಂ.ಪಿ.ಪ್ರಕಾಶ್ ನಗರ, ಹಾಗೂ ಟಿ.ಬಿ. ಡ್ಯಾಂ-ರೈಲು ನಿಲ್ದಾಣ ಮಾರ್ಗದಲ್ಲಿ ಒಟ್ಟು 20 ನಗರ ಸಾರಿಗೆ ಬಸ್ಸುಗಳನ್ನು ಶೀಘ್ರದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಹೊಸಪೇಟೆ ನಗರದಲ್ಲಿ 2ನೇ ಘಟಕ ಸ್ಥಾಪಿಸಲಾಗುವುದು ಎಂದರು.
ಉತ್ತಮ ಲಾಭ: ಬಳ್ಳಾರಿ ವಿಭಾಗದಿಂದ ಕಳೆದ ಎರಡು ವರ್ಷಗಳಿಂದ ಹೊಸಪೇಟೆ ವಿಭಾಗ ಸ್ವಾಯತ್ತ ವಿಭಾಗವಾಗಿ ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಸಂಡೂರು, ಹಗರಿಬೊಮ್ಮನಹಳ್ಳಿ ಘಟಕಗಳೊಂದಿಗೆ ಕಾರ್ಯಾರಂಭಿಸಿದ್ದು, ಪ್ರಸ್ತುತ ವಿಭಾಗದಲ್ಲಿ 14 ಅಧಿಕಾರಿಗಳು ಸೇರಿದಂತೆ ಒಟ್ಟು 1,553 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸಪೇಟೆ ವಿಭಾಗದಲ್ಲಿ 176 ಚಾಲಕರ ಕೊರತೆ ನೀಗಿಸಲೂ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಒಟ್ಟು 7 ಜಿಲ್ಲೆಗಳನ್ನು ಹೊಂದಿರುವ ಈಕರಸಾ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಿಂತ ಹೆಚ್ಚು ಲಾಭ ಹೊಂದಿದೆ. ಪ್ರತಿ ದಿನ ಸರಾಸರಿ ರು. 25 ಲಕ್ಷ ಸಾರಿಗೆ ಆದಾಯವನ್ನು ಸಂಗ್ರಹಿಸಲಾಗುತ್ತಿದೆ. ಹೊಸಪೇಟೆ ವಿಭಾಗವು ಏಪ್ರಿಲ್ 2012ರಿಂದ ಫೆಬ್ರವರಿ 2013ರ ವರೆಗೆ ರು. 79.92 ಕೋಟಿ ಆದಾಯ ಗಳಿಸಿದೆ. ಶೇ. 13.3 ರಷ್ಟು ಸಾರಿಗೆ ಆದಾಯ ವೃದ್ಧಿಯಾಗಿದೆ ಎಂದರು.
ವಿವಿಧ ಕಾಮಗಾರಿಗೆ ಚಾಲನೆ: ರು. 4 ಕೋಟಿ ವೆಚ್ಚದಲ್ಲಿ ಕೂಡ್ಲಿಗಿಯ ಹೊಸಬಸ್ ನಿಲ್ದಾಣ ನಿರ್ಮಾಣ, ರು. 1 ಕೋಟಿ ವೆಚ್ಚದಲ್ಲಿ ಕೂಡ್ಲಿಗಿ ಬಸ್ ನಿಲ್ದಾಣದ ಆವರಣಕ್ಕೆ ಟ್ರೀಮಿಕ್ಸ್ ಕಾಂಕ್ರೀಟ್, ರು. 75 ಲಕ್ಷ ವೆಚ್ಚದಲ್ಲಿ ಉಜ್ಜನಿ ಬಸ್ ನಿಲ್ದಾಣ ಮೇಲ್ದರ್ಜೆಗೆ, ರು. 1 ಕೋಟಿ ವೆಚ್ಚದಲ್ಲಿ ಇಟಿಗಿ ಬಸ್ ನಿಲ್ದಾಣ ಮೇಲ್ದರ್ಜೆಗೆ, ರು. 50 ಲಕ್ಷ ವೆಚ್ಚದಲ್ಲಿ ಹೂವಿನಹಡಗಲಿ ಬಸ್ ಘಟಕ ಆವರಣಕ್ಕೆ ಟ್ರೀಮಿಕ್ಸ್ ಕಾಂಕ್ರೀಟ್, ರು. 1.5 ಕೋಟಿ ವೆಚ್ಚದಲ್ಲಿ ಹಗರಿಬೊಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿ ಟ್ರೀಮಿಕ್ಸ್ ಕಾಂಕ್ರೀಟ್, ರು. 75 ಲಕ್ಷ ವೆಚ್ಚದಲ್ಲಿ ಸಂಡೂರು ಬಸ್ ನಿಲ್ದಾಣ ಮೇಲ್ದರ್ಜೆಗೆ, ಸಂಡೂರು ಹಳೇ ಬಸ್ ನಿಲ್ದಾಣ ಆವರಣದಲ್ಲಿ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಕಾಮಗಾರಿ ಅನುಷ್ಠಾನಕ್ಕೆ ತರಲಾಗುವುದೆಂದರು.
ಹೊಸಪೇಟೆ ವಿಭಾಗದ ಡಿಸಿ ಟಿ. ಮುನಿಯಲ್ಲಪ್ಪ, ನಗರಸಭಾ ಸದಸ್ಯರಾದ ಎನ್. ರೂಪೇಶ್‌ಕುಮಾರ್, ಚಂದ್ರಕಾಂತ್ ಕಾಮತ್, ತಾಪಂ ಸದಸ್ಯ ಎಲ್. ಭೀಮಾನಾಯ್ಕ ಇದ್ದರು.