ಅನಿಯಮಿತ ಲೋಡ್ಶೆಡ್ಡಿಂಗ್: ಪ್ರತಿಭಟನೆ
ಬಳ್ಳಾರಿ: ನಗರದಲ್ಲಿನ ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ ಜೆಸ್ಕಾಂ ಕಚೇರಿಯ ಎದುರು ನಗರದ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಬಳ್ಳಾರಿಯಲ್ಲಿ ಬಿಸಿಲ ತಾಪ ಹೆಚ್ಚಾಗಿದೆ. 40 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ಈ ದಿನಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟವು ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡಿದೆ ಎಂದು ನಾಗರಿಕರು ದೂರಿದ್ದಾರೆ. ಇದಲ್ಲದೇ ಪಿಯುಸಿ ದ್ವಿತೀಯ ಪರೀಕ್ಷೆಗಳು ಪ್ರಾರಂಭವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳು ನಡೆಯುತ್ತಿವೆ. ಶೀಘ್ರವೇ ಎಸ್ಎಸ್ಎಲ್ಸಿ, ಪದವಿ ಪರೀಕ್ಷೆ, ಸಿಇಟಿ ಮತ್ತಿತರೆ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ರಾತ್ರಿ ವೇಳೆಯಲ್ಲಿ ಕೂಡಾ ಕರೆಂಟು ತೆಗೆಯುತ್ತಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಅನಿಯಮಿತ ವಿದ್ಯುತ್ ಕಡಿತ ಹಿಂಪಡೆಯಬೇಕು, ಪವರ್ ಕಟ್ ಮಾಡುವ ಸಮಯವನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮುಂಚೆಯೇ ತಿಳಿಸಿರಬೇಕು. ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ಕರೆಂಟು ತೆಗೆಯಬಾರದು, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅನಿಯಮಿತ, ಅಘೋಷಿತ ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ, ಟೈಲರ್ಗಳು, ರೆಡಿಮೇಡ್ ಗಾರ್ಮೆಂಟ್ಸ್ನವರು, ಜೆರಾಕ್ಸ್ ಅಂಗಡಿಗಳು, ಸರ್ಕಾರಿ ಆಸ್ಪತ್ರೆ, ಚಿಕಿತ್ಸಾಲಯಗಳು, ಕಚೇರಿಗಳಲ್ಲಿ ಜನತೆಗೆ ತೀವ್ರ ಆಡಚಣೆ ಉಂಟಾಗುತ್ತಿದೆ. ಹೀಗಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ 21ನೇ ವಾರ್ಡಿನ ಪಾಲಿಕೆ ಸದಸ್ಯೆ ಚಂದ್ರಕಲಾ, ಬಳ್ಳಾರಿ ನಾಗರಿಕರ ವೇದಿಕೆಯ ಶ್ಯಾಮ್ಸುಂದರ್, ಸ್ವಾಮಿ ವಿವೇಕಾನಂದ ಯುವಕ ಸಂಘದ ಧುರೀಣ ಪಿ. ಗಾದೆಪ್ಪ ಸೇರಿದಂತೆ ಕಪ್ಪಗಲ್ಲು ರಸ್ತೆ ಬುಜ್ಜಿ, ಗಂಗಣ್ಣ, ನಾಗರಾಜ ರಮೇಶ್, ನಾಗವೇಣಿ ಸುಮನ್, ಅಬ್ದುಲ್ಷೇಕ್ ಮತ್ತು ಇತರರು ಭಾಗವಹಿಸಿದ್ದರು. ಜೆಸ್ಕಾಂ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಲು ಮುಂದೆ ಬಂದಾಗ ಮುಖ್ಯ ಅಭಿಯಂತರರು ಸ್ಥಳಕ್ಕೆ ಆಗಮಿಸಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.