ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಎಸ್ಸಾರ್‌ಗೆ ಸಿಗದ ಮಾನ್ಯತೆ: ಹೆಚ್ಚಿದ ಆತಂಕ

Parashurama
Updated On : 17 Mar 2013, 11:52 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 16
ಫಸ್ಟ್ ಇಂಪ್ರೆಷನ್ ಈಜ್ ಬೆಸ್ಟ್ ಇಂಪ್ರೆಷನ್ ಎಂಬ ಮಾತು ಬಿಎಸ್ಸಾರ್ ಪಾಲಿಗೆ ಅನ್ವಯಿಸದಾಗಿದೆ. ಪ್ರಾದೇಶಿಕ ಪಕ್ಷವನ್ನು ಕಟ್ಟಿ ತಮ್ಮ ಸಾಮರ್ಥ್ಯ ತೋರಿಸಬೇಕೆಂದು ಹೊರಟವರಿಗೆ ಬಿಎಸ್ಸಾರ್ ಪಕ್ಷ ಮೊದಲ ಬಾರಿಗೆ ಎದುರಿಸಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಮತದಾರ ಎಲ್ಲೆಡೆ ಕೈಕೊಟ್ಟು ತಿರಸ್ಕರಿಸಿದ್ದಾನೆ. ಬಿಎಸ್ಸಾರ್ ಮಟ್ಟಿಗೆ ನೀರಸ ಫಲಿತಾಂಶ ಹೊರಬಿದ್ದ ಪರಿಣಾಮ ಪಕ್ಷದ ಮುಖಂಡರ ಆತಂಕ ಹೆಚ್ಚಾಗಿದೆ.
ಜನತೆ ನೀಡಿದ ಮೊದಲ ಅಘಾತದಿಂದ ಜರ್ಜರಿತರಾಗಿರುವ ಬಿಎಸ್ಸಾರ್ ಮುಖಂಡರು ಏನು ಮಾಡಬೇಕೆಂಬ ಗಂಭೀರ ಚಿಂತನೆ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇವರ ಇಂತಹ ಪರಿಸ್ಥಿತಿಯಿಂದಾಗಿ ವಿಭಿನ್ನ  ಗಾಳಿ ಸುದ್ದಿಗಳು ಹರಡತೊಡಗಿವೆ. ಅದು ಎಷ್ಟು ಸತ್ಯ, ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷ ಜೆಡಿಎಸ್‌ನೊಂದಿಗೆ ಮೈತ್ರಿ ಸಾಧಿಸುತ್ತದೆ, ಶ್ರೀರಾಮುಲು ಸೇರಿದಂತೆ ಇತರ ಮುಖಂಡರು ಜೆಡಿಎಸ್‌ಗೆ ಹೋಗುತ್ತಾರಂತೆ, ಇನ್ನೊಂದು ಕಡೆಗೆ ಸುರೇಶ್‌ಬಾಬು ಹಾಗೂ ಸೋಮಶೇಖರ ರೆಡ್ಡಿ ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಬಿಜೆಪಿಗೆ ಹೋಗುತ್ತಾರಂತೆ ಎಂಬಿತ್ಯಾದಿ ಗಾಳಿ ಸುದ್ದಿಗಳು ಬಳ್ಳಾರಿಯಲ್ಲಿ, ಇತರ ರಾಜಕೀಯ ಪಕ್ಷಗಳ ಮುಖಂಡರ ಬಾಯಲ್ಲಿ ಹರಿದಾಡುತ್ತಿವೆ. ಆದರೆ ಇವೆಲ್ಲ ಗಾಳಿ ಸುದ್ದಿಗಳನ್ನು ಪಕ್ಷದ ಮೂಲಗಳು ಅಲ್ಲಗಳೆಯುತ್ತವೆ.
ಪ್ರತಿ ಅಸ್ತ: ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದರೂ, ಅವರಲ್ಲಿನ ಪ್ರಾಬಲ್ಯ ಕಡಿಮೆಯಾಗಿಲ್ಲ.  ನಾಳೆ ಅಧಿಕಾರಿಕ್ಕೆ ಬರುತ್ತೇವೆ ಎನ್ನುವ ದೃಢನಂಬಿಕೆ ಅವರಲ್ಲಿತ್ತು.
ಇಂತಹ ನಂಬಿಕೆಯಲ್ಲಿಯೇ ಚುನಾವಣೆಗೆ ನುಗ್ಗಿದ್ದರು. ಆದರೆ ಈ ಪಕ್ಷದ ಎಲ್ಲಾ ಸಾಮರ್ಥ್ಯಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲ ಸ್ಪರ್ಧೆ ತೋರಿದ್ದರಿಂದ ಬಿಎಸ್ಸಾರ್ ಅಸ್ತ್ರಗಳು ಫಲಿಸದಾದವು. ಇದೇ ವ್ಯವಸ್ಥೆ ಮುಂದಿನ ವಿಧಾನಸಭಾ ಚುನಾವಣೆಗೆ ಮುಂದುವರಿದರೆ ಅವರ ಅಸ್ತಿತ್ವದ ಪ್ರಶ್ನೆ ಕಾಡದೆ ಇರಲಾರದು. ಅಧಿಕಾರ ಇಲ್ಲದಿದ್ದರೂ ಜನಪರ ಕಾಳಜಿ ಮೆರೆಯುವ ಮೂಲಕ ಜನರ ಮನಸ್ಸು ಸೆಳೆಯುವುದು ಈಗ ಇವರಿಗೆ ಅನಿವಾರ್ಯವಾಗಿದೆ.
ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಒತ್ತು ಅಗತ್ಯ: ಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಗೆ ಬಿಎಸ್ಸಾರ್ ಪಕ್ಷ ಹೆಚ್ಚಿನ ಒತ್ತು ನೀಡಬೇಕಿದೆ.
ಅಂದರೆ ಪಕ್ಷದ ಸ್ಟಾರ್‌ಗಳಾದ ಪಕ್ಷದ ಸ್ಥಾಪಕ ಬಿ. ಶ್ರೀರಾಮುಲು, ಶಾಸಕ ಜಿ. ಸೋಮಶೇಖರ ರೆಡ್ಡಿ, ಸುರೇಶ್‌ಬಾಬು, ಸಂಸದೆ ಶಾಂತಾ ಅವರು ಅನಿವಾರ್ಯವಾಗಿ ಹಗಲು-ರಾತ್ರಿ ಜಿಲ್ಲೆಯಲ್ಲಿ ಪ್ರಚಾರ ನಡೆಸಬೇಕಾಗಿದೆ. ಜಿಲ್ಲೆಗೆ ಹೆಚ್ಚಿನ ಒತ್ತು ನೀಡಿದರೆ ಬೇರೆ ಕಡೆಗಳಿಗೆ ಹೆಚ್ಚಿನ ಒತ್ತು ನೀಡುವುದು ಕಷ್ಟಸಾಧ್ಯ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೋಲಿನಿಂದ ಬಿಎಸ್ಸಾರ್ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಮಾತು.
ಯಾವ ತಂತ್ರಕ್ಕೆ ಮುಂದಾಗುತ್ತೆ?: ಬಿಎಸ್ಸಾರ್ ಪಕ್ಷವು ಮುಂದಿನ ಚುನಾವಣೆಯಲ್ಲಿ ಯಾವ ತಂತ್ರಕ್ಕೆ ಮುಂದಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಪಕ್ಷದಲ್ಲಿ ಮುಖಂಡರ ಕೊರತೆ ಎದ್ದು ಕಾಣುತ್ತಿದೆ.
ಶ್ರೀರಾಮುಲು, ಸೋಮಶೇಖರ ರೆಡ್ಡಿ, ಸುರೇಶ್‌ಬಾಬು, ಜೆ. ಶಾಂತಾ, ಫಕ್ಕೀರಪ್ಪ ಪ್ರಮುಖ ನಾಯಕರಾಗಿದ್ದಾರೆ. ನಾಗೇಂದ್ರ ಇವರಿಂದ ದೂರ ಸರಿಯುತ್ತಿದ್ದಾರೆ. ನಾಗೇಂದ್ರ ತನ್ನ ಬೆಂಬಲಿಗರನ್ನು ಪಕ್ಷೇತರರನ್ನಾಗಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯಲ್ಲಿ ಕಣಕ್ಕಳಿಸಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಇನ್ನು ಪೂಜಾ ಗಾಂಧಿ, ರಕ್ಷಿತಾ ಅವರ ಪ್ರಚಾರ ತಂತ್ರ ಫಲಿಸಿಲ್ಲ. ಇಂತಹ ಸಂದರ್ಭದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲು ಬಿಎಸ್ಸಾರ್ ಪಕ್ಷವು ಯಾವ ತಂತ್ರಗಳನ್ನು ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments