ಸಹಕಾರಿಗಳು ಕಾರ್ಯೋನ್ಮುಖರಾಗಬೇಕು
ಹೊಸಪೇಟೆ: ಸಂವಿಧಾನ ತಿದ್ದುಪಡಿಯಿಂದ ಸಹಕಾರಿ ಕಾಯ್ದೆಯಲ್ಲಾದ ಬದಲಾವಣೆಗಳನ್ನು ಅರಿತು ನಮ್ಮ ಸಂಸ್ಥೆಗಳ ಉಪವಿಧಿ ತಿದ್ದುಪಡಿಗೆ ಸಹಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ಬಳ್ಳಾರಿ ಜಿಲ್ಲೆಯ ಸಹಕಾರಿಗಳೊಂದಿಗೆ ಸಂವಿಧಾನ ತಿದ್ದುಪಡಿ ಹಾಗೂ ಸಹಕಾರಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಕುರಿತು ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿಗಳ ಶತಮಾನದ ಬದಲಾವಣೆಯ ಕೂಗು ಸಂವಿಧಾನ ತಿದ್ದುಪಡಿಯೊಂದಿಗೆ ಸಾಕಾರಗೊಂಡಿದೆ. ಸಂವಿಧಾನ ತಿದ್ದುಪಡಿಯಾಗಿರುವುದರಿಂದ ತಕ್ಷಣವೇ ಎಲ್ಲಾ ಸಹಕಾರಿಗಳು ತಮ್ಮ ಉಪವಿಧಿಗಳನ್ನು ತಕ್ಕಂತೆ ಬದಲಾಯಿಸುವುದು ಅನಿವಾರ್ಯವಾಗಿದೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕಾಗಿದೆ. ಪ್ರಮುಖವಾಗಿ ಸಹಕಾರಿ ಸಂಸ್ಥೆಗಳ ಹುಟ್ಟು, ಚುನಾವಣೆ, ಲೆಕ್ಕಪರಿಶೋಧನೆ, ಆಡಳಿತ ಮಂಡಳಿಯಲ್ಲಿ ಮೀಸಲಾತಿ ಮತ್ತು ಅಪರಾಧಗಳಿಗೆ ದಂಡನೆ ಒಳಗೊಂಡಂತೆ ಎರಡು ಕಾಯ್ದೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದರು.
ವಿಕಾಸ ಬ್ಯಾಂಕ್ ನಿರ್ದೇಶಕ ಅನಂತ ಜೋಶಿ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಎಲ್ಲ ಕ್ಷೇತ್ರಗಳಂತೆ ಸಹಕಾರಿ ಕ್ಷೇತ್ರದಲ್ಲಿಯೂ ಆಗುತ್ತಿದ್ದು, ಜಿಲ್ಲೆಯ ಸಹಕಾರಿಗಳು ಒಂದೆಡೆ ಸೇರಿ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ವಿಕಾಸ ಬ್ಯಾಂಕ್ ನಿರ್ದೇಶಕರಾದ ರಮೇಶ ಪುರೋಹಿತ್, ಛಾಯಾ ದಿವಾಕರ, ಎಸ್.ವಿ. ನಾಯಕ್, ಎಸ್. ಚಂದ್ರಹಾಸ, ಸಿಇಓ ಇ. ಉಮಾದೇವಿ ಮತ್ತಿತರರು ಸಭೆಯಲ್ಲಿ ಇದ್ದರು. ರಮೇಶ್ ಪುರೋಹಿತ್ ಸ್ವಾಗತಿಸಿದರು. ಬ್ಯಾಂಕ್ ಅಧಿಕಾರಿ ಪ್ರವೀಣ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.