ಹೊಸ ತಾಲೂಕು: ಕೊಗಳಿ ಸೇರ್ಪಡೆಗೆ ವಿರೋಧ
ಹಗರಿಬೊಮ್ಮನಹಳ್ಳಿ: ತಾಲೂಕಿನ ಕಂದಾಯ ಹೊಬಳಿ ಕೇಂದ್ರ ಕೊಗಳಿಯನ್ನು ನೂತನ ಕೊಟ್ಟೂರು ತಾಲೂಕಿಗೆ ಸೇರ್ಪಡೆಗೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಹೊಬಳಿ ಘಟಕ ಹಾಗೂ ಕೊಗಳಿ ಗ್ರಾಮಸ್ಥರು ತಾಲೂಕಿನ ಕೊಗಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ನಾಡಕಚೇರಿಗೆ ತೆರಳಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕರವೇ ಕಾರ್ಯಕರ್ತರು, ಗ್ರಾಮದ ವಿದ್ಯಾರ್ಥಿ, ಯುವಕರು, ರೈತರು ಸೇರಿದಂತೆ ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಕೊಗಳಿ ಕಂದಾಯ ಕೇಂದ್ರ ಸ್ಥಾನವನ್ನು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿಯೇ ಉಳಿಸಬೇಕು, ಯಾವುದೇ ಕಾರಣಕ್ಕೂ ಹೊಸದಾಗಿ ಘೋಷಣೆಯಾದ ಕೊಟ್ಟೂರು ತಾಲೂಕಿಗೆ ಸೇರಿಸಬಾರದು ಎಂದು ಆಗ್ರಹಿಸಿ ಗ್ರಾಮದ ಬಸವೇಶ್ವರ ದೇವಸ್ಥಾನ, ಹಳೇಬಸ್ ನಿಲ್ದಾಣ ಹಾಗೂ ಊರಮ್ಮ ದೇವಸ್ಥಾನದ ಮೂಲಕ ಮೆರವಣಿಗೆಯಲ್ಲಿ ತೆರಳಿ ಉಪತಹಸೀಲ್ದಾರ್‌ಗೆ ಮನವಿಪತ್ರ ಅರ್ಪಿಸಿದರು.
ಬೇರ್ಪಡಿಸಬೇಡಿ: ಕರವೇ ಹೊಬಳಿ ಘಟಕದ ಅಧ್ಯಕ್ಷ ಕೆ. ನಿಜಗುಣ ಮಾತನಾಡಿ, ಈಗಾಗಲೇ ನಾವು ಬಹು ದಶಕಗಳಿಂದಲೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿದ್ದು, ಭಾವನಾತ್ಮಕವಾಗಿ ಒಂದಾಗಿದ್ದೇವೆ. ಹೊಸ ತಾಲೂಕು ರಚನೆಯ ಆಧಾರದಲ್ಲಿ ನಮ್ಮನ್ನು ಬೇರ್ಪಡಿಸಿ ಹೊಸ ತಾಲೂಕಿಗೆ ಸೇರ್ಪಡೆ ಮಾಡುವುದು ಸರಿಯಲ್ಲ. ನಾವು ಯಾವುದೇ ಕಾರಣಕ್ಕೂ ಹಗರಿಬೊಮ್ಮನಹಳ್ಳಿ ತಾಲೂಕಿನಿಂದ ಸಂಬಂಧ ಕಳಚಿಕೊಳ್ಳಲು ಇಷ್ಟಪಡುವುದಿಲ್ಲ, ನಮ್ಮ ಭಾವನೆಗಳನ್ನು ರಾಜ್ಯ ಸರ್ಕಾರ ಮನ್ನಿಸಿ, ನಮ್ಮನ್ನು ಇದೇ ತಾಲೂಕಿನಲ್ಲಿ ಉಳಿಸಬೇಕೆಂದರು.
ನೂತನ ಕೊಟ್ಟೂರು ತಾಲೂಕು ದಾವಣಗೆರೆ ಜಿಲ್ಲೆಗೆ ಸಮೀಪವಿದ್ದು, ಭವಿಷ್ಯದಲ್ಲಿ ಕೊಟ್ಟೂರು ತಾಲೂಕು ದಾವಣಗೆರೆಗೆ ಸೇರಿದರೆ ಆಗ ಹೈದ್ರಾಬಾದ್-ಕರ್ನಾಟಕ ಪ್ರಾಂತಕ್ಕೆ ಸಂವಿಧಾನ ಕಲ್ಪಿಸಿರುವ 371ನೇ ವಿಶೇಷ ಕಾಲಂ ಸೌಲಭ್ಯದಿಂದ ನಾವು ವಂಚಿತರಾಗುತ್ತೇವೆ ಎಂಬ ಭೀತಿಯನ್ನು ನಿಜಗುಣ ವ್ಯಕ್ತಪಡಿಸಿದರಲ್ಲದೇ, ಹಲವು ದಶಕಗಳಿಂದಲೂ ಒಂದುಗೂಡಿರುವ ಪ್ರದೇಶಗಳನ್ನು ಬೇರ್ಪಡಿಸುವ ಮುನ್ನ ಆಯಾ ಪ್ರದೇಶಗಳ ಜನತೆಯ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದರು.
ಕರವೇ ಗ್ರಾಮ ಘಟಕದ ಅಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ರವಿ, ಗ್ರಾಪಂ ಸದಸ್ಯ ಎಸ್.ಪರುಶುರಾಮ, ಎಸ್. ಕೊಟ್ರೇಶ್, ಟಿ.ಎಂ. ಸೋಮಶೇಖರಯ್ಯ, ಕೆ. ಸುಭಾಷ, ಎಚ್.ಎಂ. ಮರುಳುಸಿದ್ದಯ್ಯ, ಕರವೇಯ ವಿರೇಶ್, ಮರಿಲಿಂಗಪ್ಪ, ರಾಜ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.