ಕೀಳರಿಮೆ ತೊಡೆದುಹಾಕಿ
ಹೊಸಪೇಟೆ: ಅಂಗವಿಕಲರು ಕೀಳರಿಮೆಯಿಂದ ಹೊರ ಬರಬೇಕು ಹಾಗೂ ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರಮೇಶ್ ಕೋನರೆಡ್ಡಿ ಹೇಳಿದರು.
ನಗರದ ರೋಟರಿ ಇನ್ನರ್ವ್ಹೀಲ್ ಸಂಸ್ಥೆ, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರವಣ (ಕಿವಿ) ಉಚಿತ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸರ್ಕಾರವು ಅಂಗವಿಕಲರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲದೆ ಇರುವುದರಿಂದ ವಿಫಲವಾಗುತ್ತವೆ. ರೋಟರಿಯಂತಹ ಸಾಮಾಜಿಕ ಕಳಕಳಿಯುಳ್ಳ ಸಂಸ್ಥೆಗಳು ಮುಂದೆ ಬಂದಾಗ ಯೋಜನೆಗಳ ಅನುಷ್ಠಾನ ಸಫಲವಾಗಲು ಸಾಧ್ಯ ಎಂದರು.
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವೈದ್ಯೆ ಡಾ. ಭಾಗ್ಯಶ್ರೀ ಮಾತನಾಡಿ, ಕಿವಿ ಸೋರುವುದನ್ನು ಕಡೆಗಣಿಸಿದರೆ ಶಾಶ್ವತವಾದ ಅಂಗವೈಕಲ್ಯ ಉಂಟಾಗುತ್ತದೆ. ಕಿವಿ, ಉಗ್ಗುವಿಕೆ, ತೊದಲುವಿಕೆ ತೊಂದರೆ ಇರುವ ಮಗುವಿಗೆ 5 ವರ್ಷದೊಳಗೆ ಸರಿಯಾದ ಚಿಕಿತ್ಸೆ ನೀಡಬೇಕು. ಹುಟ್ಟಿದ ಮಗುವಿನ ಚಲನವಲನವನ್ನು ಪೋಷಕರು ಎಚ್ಚರಿಕೆಯಿಂದ ಗಮನಹರಿಸುವುದು ಅತಿ ಮುಖ್ಯ. ಕಿವಿ ಅಥವಾ ನರದ ತೊಂದರೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಮಗು ಮೂಕನಾಗುವುದನ್ನು ತಡೆಯಲು ಸಾಧ್ಯ ಎಂದರು.
ಶಿಬಿರದ ಪ್ರಾಯೋಜಕ ಗೊಗ್ಗ ಸಿದ್ಧಲಿಂಗಸ್ವಾಮಿ, ಗೊಗ್ಗ ವಿಶ್ವನಾಥ, ರೋಟರಿ ಅಧ್ಯಕ್ಷ ಸೈಯದ್ ನಾಜೀಮುದ್ದೀನ್, ಮಹಮದ್ ಸೈಯದ್, ಇನ್ನರ್ವ್ಹೀಲ್ ಕಾರ್ಯದರ್ಶಿ ಮಣಿ, ವಿಜಯ ಅಗ್ನಿಹೋತ್ರಿ, ಬಿ.ಆರ್.ಓ. ಕೀರ್ತಿ ಅತಿಥಿಗಳಾಗಿ ಭಾಗವಹಿಸಿದ್ದರು.