ಗುಣಮಟ್ಟದ ವಿದ್ಯುತ್: ರೈತರ ಪ್ರತಿಭಟನೆ
ಹೂವಿನಹಡಗಲಿ: ಸರ್ಕಾರ ನಿಗದಿ ಮಾಡಿ ಪೂರೈಕೆ ಪಟ್ಟಿ ಬಿಡುಗಡೆ ಮಾಡಿರುವ ಹಾಗೆ ರೈತರಿಗೆ ಗುಣ ಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ, ತಾಲೂಕಿನ ಮಾಗಳ ಗ್ರಾಮದ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ವಿದ್ಯುತ್ ಲಭ್ಯತೆ ಆಧರಿಸಿ ಜೆಸ್ಕಾಂ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಹಗಲು 4, ರಾತ್ರಿ 4 ತಾಸು ನಿರಂತರ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡುವುದಾಗಿ ಇಲಾಖೆ ಹೊರಡಿಸಿರುವ ಪ್ರಕಟಣೆಯಂತೆ ಗುಣಮಟ್ಟದ ವಿದ್ಯುತ್ ನೀಡುವಂತೆ ರೈತರು ಒತ್ತಾಯಿಸಿದರು.
ಇಲಾಖೆ ಆದೇಶವನ್ನು ಜೆಸ್ಕಾಂನ ಅಧಿಕಾರಿಗಳೇ ಅನುಷ್ಠಾನಗೊಳಿಸದಿರುವಾಗ ಯಾವ ಪುರುಷಾರ್ಥಕ್ಕೆ ಪ್ರಕಟಣೆ ಹೊರಡಿಸಬೇಕು? ಎಂದು ರೈತರು ಪ್ರಶ್ನಿಸಿದರು. ರೈತರನ್ನು ಸಮಾಧಾನಪಡಿಸಲು ಯತ್ನಿಸಿದ ಜೆಸ್ಕಾಂ ಎಇಇ ಪ್ರಕಾಶ ನಾಯ್ಕ, ಇಲಾಖೆ ಹೊರಡಿಸಿದ ಪ್ರಕಟಣೆಯಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿಲ್ಲ. ಲಭ್ಯತೆ ಆಧಾರದ ಮೇಲೆ ಸರಬರಾಜು ಮಾಡಲಾಗುವುದು ಎಂದು ಹೇಳಿದರು. ಈ ಹೇಳಿಕೆಯಿಂದ ಆಕ್ರೋಶಗೊಂಡ ರೈತರು, ಉತ್ತರ ನೀಡಲು ಮೇಲಧಿಕಾರಿಗಳನ್ನು ಕರೆಸುವ ವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.
ಪಿಎಐ ಆಂಜನೇಯ ಮಧ್ಯಸ್ಥಿಕೆಯಲ್ಲಿ ಜೆಸ್ಕಾಂ ಉಪ ವಿಭಾಗದ ಅಧಿಕಾರಿಗಳು ಮಾತುಕತೆ ನಡೆಸಿ, 2 ದಿನಗಳೊಳಗೆ ಮೇಲಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. 2 ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಅರವಳ್ಳಿ ವೀರಣ್ಣ, ಎಚ್.ಎಸ್. ಸಾಹುಕಾರ, ಸುರೇಶ ರೆಡ್ಡಿ, ಮಠದ ರಾಜ, ಅಂಬಿಗರ ತಿರುಕಪ್ಪ, ಸಾಯಿರಾಮ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.