ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

24ರಂದು ಕೊಟ್ಟೂರಿಗೆ ಶರಣ ಸಂಸ್ಕೃತಿ ಮಹಾಯಾತ್ರೆ, ಮೆರವಣಿಗೆ

Mainashree
Updated On : 20 Mar 2013, 10:37 am

ಕೊಟ್ಟೂರು: ಬಸವ ಜಯಂತಿ ಶತಮಾನೋತ್ಸವದ ಅಂಗವಾಗಿ ಬಸವ ಸಮಿತಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆರಂಭಿಸಿರುವ ಶರಣ ಸಂಸ್ಕೃತಿ ಮಹಾಯಾತ್ರೆ ಮಾ. 24ರಂದು ಕೊಟ್ಟೂರಿಗೆ ಆಗಮಿಸಲಿದೆ. ಈ ಸಂಬಂಧ ಪಟ್ಟಣದಲ್ಲಿ ಅಂದು ಶರಣ ಸಂಸ್ಕೃತಿ ಮಹಾಯಾತ್ರೆ ಮೆರವಣಿಗೆ ಮತ್ತು ಸಭೆಯನ್ನು ಆಯೋಜಿಸಲಾಗಿದೆ ಎಂದು ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ ಹೇಳಿದರು.
ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಗೆ ಮಾ. 24ರಂದು ಬೆಳಗ್ಗೆ 8ಕ್ಕೆ ಆಗಮಿಸುವ ಮಹಾಯಾತ್ರೆ, ಅಲಕುಂದಿ, ದೋಣಿಮಲೈ, ತಾರಾನಗರ, ಸಂಡೂರು, ಕೂಡ್ಲಿಗಿ ಮಾರ್ಗವಾಗಿ ಕೊಟ್ಟೂರಿಗೆ ಅಂದು ಮಧ್ಯಾಹ್ನ 4 ಗಂಟೆಗೆ ಆಗಮಿಸಲಿದೆ. ಬಸವ ಸಮಿತಿಯ ರಾಷ್ಟಾಧ್ಯಕ್ಷ ಅರವಿಂದ ಜತ್ತಿ ಇದರ ನೇತೃತ್ವ ವಹಿಸಿದ್ದು ಮಾ. 13ರಿಂದ ಬಸವನ ಬಾಗೇವಾಡಿಯಿಂದ ಆರಂಭಗೊಂಡಿರುವ ಯಾತ್ರೆ ಏಪ್ರಿಲ್ 14ರಂದು ಕೂಡಲಸಂಗಮದಲ್ಲಿ ಶರಣ ಸಂಸ್ಕೃತಿ ಮಹಾಯಾತ್ರೆಯೊಂದಿಗೆ ಮುಕ್ತಾಯಗೊಳ್ಳಲಿದೆ. ರಾಜ್ಯಾದ್ಯಂತ 33 ದಿನಗಳ ಈ ಮಹಾಯಾತ್ರೆ 4,850 ಕಿಮೀ ಕ್ರಮಿಸಿ ಬಸವಾದಿ ಶರಣರ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಬಿತ್ತರಿಸಲಿದೆ ಎಂದರು.
ರಾಜ್ಯ ಸರ್ಕಾರದ ಸಹಕಾರ: ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವನ್ನು ಯಾತ್ರೆಗೆ ನೀಡಿದ್ದು, ಇಲಾಖೆ ಸಚಿವ ಗೋವಿಂದ ಕಾರಜೋಳ ಈ ಸಂಬಂಧ ಕಾರ್ಯಕ್ರಮಗಳ ರೂಪುರೇಷೆಯನ್ನು ತಯಾರಿಸಿ ಸಹಕರಿಸುತ್ತಿದ್ದಾರೆ. ವೀರಶೈವ ಮಹಾಸಭೆಯ ಘಟಕಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಘಟಕಗಳು, ರಾಷ್ಟ್ರೀಯ ಬಸವದಳದ ಬಸವ ಸಮಿತಿ, ಬಸವ ಕೇಂದ್ರಗಳು, ಕಾಯಕದ ಶರಣರ ಸಮಾಜದ ಸಂಘಟನೆಗಳು, ಅನುಭಾವ ಸಂಗಮಗಳು, ಕದಳಿ ವೇದಿಕೆಗಳು, ಅಕ್ಕಮಹಾದೇವಿ ಬಳಗಗಳು ಈ ಮಹಾಯಾತ್ರೆಯ ಸಂಘಟನೆಗೆ ಕೈಜೋಡಿಸಿವೆ ಎಂದು ತಿಳಿಸಿದರು.
ಬಸವ ಜಯಂತಿಯ ಶತಮಾನೋತ್ಸವದ ಸಂಸರಣೆಯನ್ನು ಸದಾ ಜನಮಾನಸದಲ್ಲಿ ಹಸಿರಾಗಿಸುವಂತೆ ಶರಣ ಸಂಸ್ಕೃತಿಯಲ್ಲಿ ಬದುಕಿ, ಸಂಸ್ಕೃತಿಯನ್ನು ಉಳಿಸೋಣ, ಬೆಳೆಸೋಣ, ಸಂರಕ್ಷಿಸೋಣ ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾರಲಾಗುವುದು. ಮಹಾಯಾತ್ರೆಯುದ್ದಕ್ಕೂ ಹರ-ಗುರು-ಚರ ಮೂರ್ತಿಗಳು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ವೀರಶೈವ ಮಹಾಸಭಾದ ಎಂ.ಎಂ.ಜೆ. ಸತ್ಯಪ್ರಕಾಶ್, ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಕೊಟ್ರೇಶ್, ಮೃತ್ಯುಂಜಯ ಹುಡೇದ್, ಪಿ. ಹರೀಶ್‌ಗೌಡ, ದೇವರಮನಿ ಕೊಟ್ರೇಶ್, ಜಿ. ಸೋಮಶೇಖರ್, ಪ್ರಾಚಾರ್ಯ ಪುರ್ತಿಗೆರೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement