ತೆರಿಗೆ ಇಳಿಸುವುದು ಪಾಲಿಕೆ ಸದಸ್ಯರ ಇಂಗಿತ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 19
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರ ನೀರಿನ ತೆರಿಗೆಯನ್ನು ರು. 100ರಿಂದ ರು. 50ಕ್ಕೆ ಇಳಿಸುವುದು, ಮನೆ ತೆರಿಗೆ ಡಿಎಸ್ಆರ್ನ್ನು ಅರ್ಧಕ್ಕೆ ಕಡಿಮೆ ಮಾಡುವ ಇಂಗಿತವನ್ನು ಕಾಂಗ್ರೆಸ್ನ ಪಾಲಿಕೆ ಸದಸ್ಯರು ವ್ಯಕ್ತಪಡಿಸಿದ್ದು, ಅದನ್ನು ಏಪ್ರಿಲ್ನಿಂದಲೇ ಜಾರಿಗೊಳಿಸಲಾಗುತ್ತದೆ ಎಂದು ಮಾಜಿ ಸಚಿವ ಎಂ. ದಿವಾಕರಬಾಬು ತಿಳಿಸಿದರು.
ಪಾಲಿಕೆಯ 20ನೇ ವಾರ್ಡಿನ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೂರ್ಯಪ್ರಕಾಶ್ ಅವರ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹತ್ತು ವರ್ಷದ ಮೇಲೆ ಜನರು ಕಾಂಗ್ರೆಸ್ ಆಯ್ಕೆ ಮಾಡಿದ್ದಾರೆ. ಜನರ ಮೇಲೆ ಹೇರಿರುವ ನೀರಿನ ತೆರಿಗೆಯನ್ನು ಮೊದಲು ಕಡಿಮೆ ಮಾಡಲಾಗುತ್ತದೆ. ಅದರಂತೆ ಕಳೆದ 10 ವರ್ಷದ ಹಿಂದೆ ಕಟ್ಟಿರುವ ಮನೆಗಳಿಗೆ ಡಿಎಸ್ಆರ್ (ಡಿಸ್ಟ್ರಿಕ್ಟ್ ಶೆಡ್ಯೂಲ್ಡ್ ರೇಟ್) ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ. ಅರ್ಧದಷ್ಟು ಡಿಎಸ್ಆರ್ ಕಡಿಮೆಗೊಳಿಸಲಾಗುತ್ತದೆ. ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಆಯ್ಕೆಯಾದ ನಂತರ ತೆರಿಗೆ ಕಡಿಮೆ ಮಾಡಲಾಗುತ್ತದೆ. ಆದರೂ ಏಪ್ರಿಲ್ನಿಂದಲೇ ಅದು ಅನ್ವಯಿಸುತ್ತದೆ ಎಂದರು.
ನಮ್ಮ ರಾಜಕೀಯ ನಾವು ಮಾಡುತ್ತೇವೆ: ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಎಸ್ಟಿ ಮಹಿಳೆಗೆ ಮೀಸಲಾತಿ ತರುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ಮೀಸಲಾತಿಯನ್ನು ತರುತ್ತಾರೋ ತರಲಿ, ಅವರ ರಾಜಕೀಯ ಅವರು ಮಾಡಲಿ, ನಮ್ಮ ರಾಜಕೀಯ ನಾವು ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಮೊದಲು ಕೆಲಸ ಮಾಡುತ್ತದೆ. ಅನಂತರ ರಾಜಕೀಯ ಮಾಡುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು, ಜನರೇ ಅವರಿಗೆ ನೀರು ಕುಡಿಸುತ್ತಾರೆ ಎಂದು ಸೂಚ್ಯವಾಗಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರ ವಿರುದ್ಧ ಚಾಟಿ ಬೀಸಿದರು.
ಹೈಕಮಾಂಡ್ಗೆ ಬಿಟ್ಟ ವಿಚಾರ: ಹೈಕಮಾಂಡ್ ಟಿಕೆಟ್ ಯಾರಿಗೆ ನೀಡುತ್ತದೋ ಅವರ ಪರವಾಗಿ ಕೆಲಸ ಮಾಡಲಾಗುತ್ತದೆ. ತಾವು ಕೂಡ ಆಕಾಂಕ್ಷಿಯಾಗಿದ್ದು, ಎಐಸಿಸಿ ಕಳುಹಿಸಿರುವ ಆಕಾಂಕ್ಷಿಗಳ ಪಟ್ಟಿ ಆಂತರಿಕ ವಿಷಯ. ಈ ಬಗ್ಗೆ ತಮಗೆ ಗೊತ್ತಿಲ್ಲ ಎಂದರು. ಡಿಸಿ, ಎಸ್ಪಿ ಅವರು ಕಾಂಗ್ರೆಸನ್ನು ಗೆಲ್ಲಿಸಿದ್ದಾರೆ ಎಂದು ಮಾತನಾಡುವುದು ಸರಿಯಲ್ಲ, ಡಿಸಿ, ಎಸ್ಪಿಯವರು ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಡಬೇಕೆಂಬ ಅರ್ಥ ಅವರ ಮಾತಿನಿಂದ ತಿಳಿಯುತ್ತದೆ. ಈ ಹಿಂದೆ ಚುನಾವಣೆಯಲ್ಲಿ ಡಿಸಿ, ಎಸ್ಪಿ ಅವರು ಅವರ ಪಕ್ಷವನ್ನು ಗೆಲ್ಲಿಸಿಕೊಟ್ಟಿದ್ದಾರೆಯೇ? ತಾವು ಕೂಡ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ. ಆ ಹೋರಾಟ ಸಾರ್ವಜನಿಕರಿಗೆ ಸೌಲಭ್ಯ ಕೊಡಿಸುವುದಕ್ಕಾಗಿ ಇರುತ್ತದೆಯೇ ಹೊರತು, ಚುನಾವಣೆಯ ವಿಷಯಕ್ಕಲ್ಲ ಎಂದು ತಿಳಿಸಿದರು. ಇನ್ನು ನಗರದ ಸಿದ್ಧಾರ್ಥ ಕಾಲೋನಿಯ ಸೂರ್ಯಪ್ರಕಾಶ್ ಅವರು ಮನೆಯಲ್ಲಿಯೇ ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಎಂ. ದಿವಾಕರಬಾಬು ಅವರು ಕರೆದು ಚರ್ಚಿಸಿದ್ದು, ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು, ಪರಾಜಿತ ಸದಸ್ಯರು ಇದ್ದರು.