ಪಕ್ಷೇತರ ಅಭ್ಯರ್ಥಿಯಾಗಿ ಮೇಕಲ ಈಶ್ವರ ರೆಡ್ಡಿ ಕಣಕ್ಕೆ
ಬಳ್ಳಾರಿ: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಘೋಷಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಆಡಳಿತ ನಡೆಸಿದ ಬಿಜೆಪಿ, ಕಾಂಗ್ರೆಸ್, ಇದೀಗ ಹುಟ್ಟಿಕೊಂಡಿರುವ ಬಿಎಸ್ಸಾರ್ ಪಕ್ಷಗಳು ಕೇವಲ ಅಭಿವೃದ್ಧಿ ಮಂತ್ರ ಜಪಿಸುತ್ತಿವೆ. ಆದರೆ ನಿರೀಕ್ಷಿತ ಅಭಿವೃದ್ಧಿ ಸಾಧನೆ ಮಾಡಿಲ್ಲ. ದೌರ್ಜನ್ಯ, ದಬ್ಬಾಳಿಕೆಯನ್ನು ಅವು ಕೊಡುಗೆಯಾಗಿ ನೀಡಿವೆ ಎಂದು ಟೀಕಿಸಿದರು.
ಮಹಾನಗರ ಪಾಲಿಕೆಯ ವಾಸ್ತವ ಪರಿಸ್ಥಿತಿಯನ್ನು ತಿಳಿಯಲು 35 ವಾರ್ಡ್‌ಗಳಲ್ಲಿ 120 ದಿನಗಳ ಕಾಲ ಪಾದಯಾತ್ರೆ ಮಾಡಲಾಗಿದೆ. ಬಹುತೇಕ ವಾರ್ಡ್‌ಗಳು ನೈರ್ಮಲ್ಯದ ಕೊರತೆಯನ್ನು ಎದುರಿಸುತ್ತಿವೆ. ಕುಡಿಯುವ ನೀರಿನ ಜನರು ತತ್ವಾರ ಪಡುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಧೈರ್ಯ ಜನಸಾಮಾನ್ಯರಿಗಿಲ್ಲ, ಆದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಜನರು ತಮ್ಮನ್ನು ಬೆಂಬಲಿಸಿ, ಗೆಲ್ಲಿಸಿದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ವಾರಕ್ಕೆ ಎರಡು ದಿನ ಕುಡಿವ ನೀರು ಸರಬರಾಜು, ಎಲ್ಲ ಬೀದಿಗಳಲ್ಲಿ ಸಿಮೆಂಟ್ ರಸ್ತೆ, ನ್ಯಾಯಬೆಲೆ ಅಂಗಡಿಗಳಲ್ಲಿ ವೈಜ್ಞಾನಿಕ ತಕ್ಕಡಿ ಜಾರಿಗೊಳಿಸುವುದು. ಬಡ ಜನರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು ಎಂದರು.
ಪ್ರತಿ ವಾರ್ಡ್‌ಗಳಲ್ಲಿ ಸ್ವಂತ ಖರ್ಚಿನಲ್ಲಿ ಕಚೇರಿಯನ್ನು ತೆರೆದು 10 ಕಾರ್ಯಕರ್ತರನ್ನು ನೇಮಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಸೇರಿದಂತೆ ಯುವ ಸೇನೆಯ ಹಲವು ಕಾರ್ಯಕರ್ತರು ಇದ್ದರು.