ಮಾನಭಂಗಕ್ಕೆ ಯತ್ನಿಸಿದವರ ಮನೆ ಮುಂದೆ ಧರಣಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 23
ಅಂಗನವಾಡಿ ಕಾರ್ಯಕರ್ತೆಯ ಮೇಲೆ ಮಾನಭಂಗ ಮಾಡಲು ಪ್ರಯತ್ನಿಸಿದ್ದ ತಾಲೂಕಿನ ಹರವಿ ಸಿದ್ದಾಪುರದ ಪುಡಾರಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಆರೋಪಿಗಳ ಮನೆ ಮುಂದೆ ಹಾಗೂ ಪೊಲೀಸ್ ಠಾಣೆ ಮುಂದೆ ರಾಜ್ಯ ಅಂಗನವಾಡಿ ಫೆಡರೇಷನ್ನಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅಂಗನವಾಡಿ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಅಂಗನವಾಡಿ ಫೆಡರೇಷನ್, ಎಐಟಿಯುಸಿ ಮತ್ತು ರಾಜ್ಯ ಕಿಸಾನ್ ಸಭಾ ಸಹಯೋಗದಲ್ಲಿ ತಾಲೂಕಿನ ಹರವಿ ಸಿದ್ದಾಪುರದ ಅಂಗನವಾಡಿ ಕಾರ್ಯಕರ್ತೆ ಮೇಲೆ ನಡೆದ ಮಾನಭಂಗ ಪ್ರಯತ್ನವನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಶನಿವಾರ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡದರು.
ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಅಸಡ್ಡೆ ಸಲ್ಲದು. ಈ ದೇಶದ ಮಕ್ಕಳ ಭವಿಷ್ಯ ನಿರ್ಮಾಣದ ಶಕ್ತಿ ಹೊಂದಿದ್ದಾರೆ. ಇಂತಹ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಮಾನಭಂಗ, ಅತ್ಯಾಚಾರ, ದೌರ್ಜನ್ಯ ದಬ್ಬಾಳಿಕೆಯಂತಹ ಘಟನೆ ನಡೆದಾಗ ಮಹಿಳೆಯರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡದೆ, ದೂರು ತೆಗೆದುಕೊಳ್ಳದೆ ಅಸಹ್ಯವಾಗಿ ನಡೆದುಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಿಬ್ಬಂದಿ ಕೈವಾಡ: ಮಾನಭಂಗ ನಡೆಯಲು ಸಿಡಿಪಿಓ ಇಲಾಖೆ ಸಿಬ್ಬಂದಿ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸುತ್ತಾ, ಒಬ್ಬ ಕಾರ್ಯಕರ್ತೆ ಮೇಲೆ ದೌರ್ಜನ್ಯ, ಮಾನಭಂಗ ಪ್ರಯತ್ನ ನಡೆದಾಗ ಸಿಡಿಪಿಓ ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸಿಲ್ಲ. ಇವರಿಗೆ ಆಕೆಯ ಬಗ್ಗೆ ಕಳಕಳಿ ಇಲ್ಲ. ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೇಲ್ವಿಚಾರಕಿಯರು 10 ವರ್ಷದಿಂದ ಕೆಲಸ ಮಾಡುತ್ತಿದ್ದರೂ ಬೇರೆಡೆ ವರ್ಗಾವಣೆ ಮಾಡದೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್ ಮಾತನಾಡಿ, ಇಲಾಖೆ ಅಧಿಕಾರಿಗಳ ದಬ್ಬಾಳಿಕೆ ಹೆಚ್ಚಾಗಿದೆ. ಕಾರ್ಯಕರ್ತೆಗೆ ಯಾವುದೇ ನೋಟಿಸ್ ನೀಡದೆ ಬಳ್ಳಾರಿ ಡಿಡಿ ವಜಾ ಮಾಡುತ್ತಿರುವುದು ಇವರ ಸರ್ವಾಧಿಕಾರತ್ವ ಧೋರಣೆಯಾಗಿದೆ. ಇದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿದ ಬಸವರಾಜ, ಮಹಾಂತೇಶ ವಿರುದ್ಧ ದೂರು ನೀಡಲು ಬಂದರೆ ಪೊಲೀರು ದೂರು ಪಡೆಯಲು ಹಿಂದೇಟು ಹಾಕಿದ್ದಾರೆ. ಆದರೆ ಕೇಂದ್ರ ಸರ್ಕಾರ ಇಂತಹವುಗಳನ್ನು ತಡೆಯಲು ಕಾನೂನುಗಳನ್ನು ಜಾರಿಗೊಳಿಸಿದರೂ ಪ್ರಯೋಜನವಿಲ್ಲ. ಮೊದಲು ಅಂತಹ ಅಧಿಕಾರಿಯನ್ನು ಜೈಲಿಗೆ ಕಳಿಸಬೇಕೆಂದು ಒತ್ತಾಯಿಸಿದರು.
ಕಿಸಾನ್ ಸಭಾದ ಹೊಸಳ್ಳಿ ಮಲ್ಲೇಶ, ಚಂದ್ರು, ಅಡಿವೆಪ್ಪ, ರಾಣಿ, ಅರ್ಕಾಣಿ ಸೇರಿದಂತೆ ಇತರರು ಮಾತನಾಡಿದರು. ಬಳಿಕ ತಹಸೀಲ್ದಾರ್ ಏಜಾಜ್ಬೇಗ್, ಸಿಡಿಪಿಓ ಅಸ್ತರ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ತಾಲೂಕು ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ, ತಾಲೂಕು ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್. ಮಂಜುಳ, ಕಾರ್ಯದರ್ಶಿ ಕಮಲಾಕ್ಷಿ, ಎಂ. ರೇಣುಕಮ್ಮ, ಸುರೇಶ ಅಂಗಡಿ, ಸುರೇಶ, ಕೊಟ್ರಮ್ಮ, ಹೇಮಾವತಿ, ಗಂಗಮ್ಮ, ಪ್ರೇಮಕ್ಕ, ಚನ್ನಮ್ಮ, ವಿಜಯ, ವಿ.ಪಿ. ಶೈಲಜಾ, ಸುನಂದಾ, ಪಾರ್ವತಿ, ಜೆ. ಇಂದಿರಾ, ಎಚ್.ಬಿ. ಶಾಂತಾ ಸೇರಿದಂತೆ ನೂರಾರು ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.