ಶ್ರೀರಾಮುಲು ಬಂಧನ: ಉದ್ರಿಕ್ತ ಪರಿಸ್ಥಿತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 23
ಬೀದಿಬದಿ ವ್ಯಾಪಾರಿಗಳ ತೆರವು ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಬಿಎಸ್‌ಆರ್ ಸಂಸ್ಥಾಪಕ ಶ್ರೀರಾಮುಲು, ಇತರರನ್ನು ಪೊಲೀಸರು ಬಂಧಿಸುವ ವೇಳೆ ನಗರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಯಿತು.
ಶ್ರೀರಾಮುಲು, ಸಂಸದೆ ಜೆ. ಶಾಂತಾ, ಮೃತ್ಯುಂಜಯ ಜಿನಗಾ ಸೇರಿದಂತೆ 62 ಜನರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ನಗರದ ಬೀದಿಬದಿಯ ವ್ಯಾಪಾರಿಗಳನ್ನು ತೆರವುಗೊಳಿಸುವ ಕ್ರಮ ಖಂಡಿಸಿ ಬಳ್ಳಾರಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಶ್ರೀರಾಮುಲು ಇತರರು ಶುಕ್ರವಾರ ಧರಣಿ ಆರಂಭಿಸಿದ್ದರು. ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ, ಧರಣಿ ನಿರತರೊಂದಿಗೆ ಚರ್ಚಿಸಬೇಕು. ಅಲ್ಲಿಯವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಶ್ರೀರಾಮುಲು ಪಟ್ಟು ಹಿಡಿದು ಕುಳಿತಿದ್ದರು. ಶುಕ್ರವಾರ ಇಡೀ ರಾತ್ರಿ, ಶನಿವಾರ ಬೆಳಗ್ಗೆ ಧರಣಿ ಮುಂದುವರಿದಿತ್ತು. ಆದರೆ ಅವರ ಬೇಡಿಕೆಗೆ ಜಿಲ್ಲಾಧಿಕಾರಿ ಸೊಪ್ಪು ಹಾಕಿರಲಿಲ್ಲ.
ಶನಿವಾರ ಬೆಳಗ್ಗೆ ಪಾಲಿಕೆ ಮುಂಭಾಗದಲ್ಲಿ ವಾಹನ ದಟ್ಟಣೆ, ಇತರ ಸಮಸ್ಯೆ ತಲೆದೋರಿತು. ಹೀಗಾಗಿ ಧರಣಿ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರು. ಶ್ರೀರಾಮುಲು, ಇತರ ಮುಖಂಡರು ಧರಣಿ ಕೈಬಿಡಲು ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಯಿತು.
ಉದ್ರಿಕ್ತ ಪರಿಸ್ಥಿತಿ: ಅಪರ ಜಿಲ್ಲಾಧಿಕಾರಿ ವಿಜಯ್‌ಕುಮಾರ್ ಅವರು ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು, ಬೀದಿ ಬದಿಯ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಒದಗಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿ ಹೊರಟರು. ಅದರಿಂದ ತೃಪ್ತರಾಗದ ಪ್ರತಿಭಟನಾನಿರತರು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ಪೊಲೀಸರು ಪ್ರತಿಭಟನಾನಿರತರ ಬಂಧನಕ್ಕೆ ಮುಂದಾಗಬೇಕಾಯಿತು. ಈ ಸಂದರ್ಭದಲ್ಲಿ 2 ತಾಸಿಗೂ ಹೆಚ್ಚು ಕಾಲ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
62 ಜನರ ಬಂಧನ, ಬಿಡುಗಡೆ: ಸಂಸದೆ ಜೆ. ಶಾಂತಾ, ಇತರ ಮುಖಂಡರನ್ನು ಬಂಧಿಸಿ, ಪೊಲೀಸರು ಕರೆದೊಯ್ದರು. ಶ್ರೀರಾಮುಲು ಅವರನ್ನು ಬಂಧಿಸಲು ಮುಂದಾದಾಗ ಪಕ್ಷದ ಕಾರ್ಯಕರ್ತರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು-ಶ್ರೀರಾಮುಲು ಬೆಂಬಲಿಗರ ಮಧ್ಯೆ ತಳ್ಳಾಟ ನಡೆಯಿತು. ನೂಕಾಟದಲ್ಲಿ ಶ್ರೀರಾಮುಲು ಅವರ ಅಂಗಿ ಹರಿದುಹೋಯಿತು. ಪೊಲೀಸರು ಬೆಂಬಲಿಗರಿಂದ ಬಿಡಿಸಿಕೊಂಡು ಬಿ. ಶ್ರೀರಾಮುಲು ಅವರನ್ನು ಬಂಧಿಸಿ, ಡಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು. ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದ್ದಂತೆ ಅವರನ್ನು ನಿಯಂತ್ರಿಸಲು ಪೊಲೀಸರು ಕಷ್ಟಪಟ್ಟರು. ಲಾಠಿ ಏಟಿನ ಮೂಲಕ ಕಾರ್ಯಕರ್ತರನ್ನು ಚದುರಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಂಡಿತು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಮುಂಜಾಗ್ರತಾ ಕ್ರಮವಾಗಿ ಶ್ರೀರಾಮುಲು, ಶಾಂತಾ, ಮೃತ್ಯುಂಜಯ ಜಿನಗಾ, ಡಾ. ಮಹಿಪಾಲ್, ದಿವಾಕರ, ಗೋವಿಂದರಾಜು, ಇಬ್ರಾಹಿಂಬಾಬು ಇತರ 62 ಜನರನ್ನು ಬಂಧಿಸಲಾಯಿತು. 2.45 ಸುಮಾರಿಗೆ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.
ನಡೆದಿದ್ದೇನು?: ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿರುವ ಜಿಲ್ಲಾಧಿಕಾರಿ ಕ್ರಮ ಸರಿಯಲ್ಲ. ಅದರಿಂದ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದೆ. ಈ ನಿರ್ಧಾರವನ್ನು ಜಿಲ್ಲಾಧಿಕಾರಿ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಎಸ್‌ಆರ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಧರಣಿ ಆರಂಭಿಸಲಾಗಿತ್ತು. ಪಕ್ಷದ ಮುಖಂಡರಾದ ಶ್ರೀರಾಮುಲು, ಸೋಮಶೇಖರ ರೆಡ್ಡಿ, ಜೆ. ಶಾಂತಾ, ಸುರೇಶಬಾಬು ಪಾಲ್ಗೊಂಡಿದ್ದರು. ಆದರೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿರಲಿಲ್ಲ. ಅದರಿಂದ ಕೆರಳಿದ ಧರಣಿನಿರತರು ಅಹೋರಾತ್ರಿ ಧರಣಿ ಮುಂದುವರಿಸಿದ್ದರು. ಶನಿವಾರ ಬೆಳಗ್ಗೆ 12 ಗಂಟೆಯೊಳಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಅವರೇ ಹೊಣೆ ಎಂದು ಶ್ರೀರಾಮುಲು ಗಡುವು ನೀಡಿದ್ದರು.
ಒಂದೆಡೆ ನೀತಿ ಸಂಹಿತೆ, ಇನ್ನೊಂದೆಡೆ ಸಂಚಾರ ನಿಯಂತ್ರಣ ಸಮಸ್ಯೆ ಎದುರಿಸಬೇಕಾಯಿತು. ಹೀಗಾಗಿ ಪೊಲೀಸರು ಬಂಧನಕ್ಕೆ ಮುಂದಾದರು.