ಸರ್ಕಾರಿ ಕಾಲೇಜಿಗೂ 12 ರ್ಯಾಂಕ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 23
ಸರ್ಕಾರಿ ಶಾಲಾ-ಕಾಲೇಜುಗಳು ಎಂದರೆ ಮೂಗು ಮುರಿಯುವವರೆ ಹೆಚ್ಚು. ಮಕ್ಕಳು ಚೆನ್ನಾಗಿ ಓದಿ ರ್ಯಾಂಕ್ ಪಡೆಯಬೇಕಾದರೆ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಓದಿದರೆ ಮಾತ್ರ ಸಾಧ್ಯ ಎನ್ನುವ ಭಾವನೆ ಬಹುತೇಕ ಪೋಷಕರು, ವಿದ್ಯಾರ್ಥಿಗಳಲ್ಲಿದೆ. ಆದರೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಸಾಧ್ಯ ಎಂಬುದನ್ನು ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ.
2012ರ ಜೂನ್ನಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು 12 ರ್ಯಾಂಕ್ಗಳನ್ನು ಪಡೆದು ಖಾಸಗಿ ಕಾಲೇಜುಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.
ವಿಶ್ವವಿದ್ಯಾಲಯದ ವ್ಯಾಪ್ತಿಯ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ 10 ಸ್ನಾತಕೋತ್ತರ ಕಾಲೇಜುಗಳಿದ್ದು, ಅದರಲ್ಲಿ ಗಂಗಾವತಿ ಮತ್ತು ಬಳ್ಳಾರಿಯಲ್ಲಿ ತಲಾ ಒಂದು ಸರ್ಕಾರಿ ಸ್ನಾತಕೋತ್ತರ ಕಾಲೇಜಿದೆ.
ಕೊಪ್ಪಳದಲ್ಲಿ 2 ಖಾಸಗಿ ಕಾಲೇಜು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 6 ಖಾಸಗಿ ಸ್ನಾತಕೋತ್ತರ ಕಾಲೇಜಗಳಿದ್ದು, ಎಲ್ಲ ಖಾಸಗಿ ಕಾಲೇಜುಗಳನ್ನು ಹಿಂದಿಕ್ಕಿ ಬಳ್ಳಾರಿಯ ಸರಳಾದೇವಿ ಸ್ನಾತಕೋತ್ತರ ಕಾಲೇಜು 12 ರ್ಯಾಂಕ್ ಪಡೆಯುವ ಮೂಲಕ ಈ ವರ್ಷದ ರ್ಯಾಂಕಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದು ಕಾಲೇಜು ಇತಿಹಾಸದಲ್ಲೇ 12 ರ್ಯಾಂಕ್ ಪಡೆದಿರುವುದು ಪ್ರಥಮ.
ರಾಜ್ಯದಲ್ಲಿಯೇ ಅತಿದೊಡ್ಡ ಕಾಲೇಜು: ಇಡೀ ರಾಜ್ಯದಲ್ಲಿಯೇ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬೆಂಗಳೂರಿನ ರಾಮನಾರಾಯಣ ಸರ್ಕಾರಿ ಕಾಲೇಜು ಬಿಟ್ಟರೆ, ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವುದೇ ಬಳ್ಳಾರಿ ಸರಳಾದೇವಿ ಕಾಲೇಜಾಗಿದೆ. ಇಲ್ಲಿ ಸುಮಾರು ಪದವಿ ಹಾಗೂ ಸ್ನಾತಕೋತ್ತರ ಸೇರಿ 4000 ವಿದ್ಯಾರ್ಥಿಗಳು ಇದ್ದಾರೆ. ಸರ್ಕಾರಿ ಕಾಲೇಜಾದರೂ ಕೇವಲ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೊಡ್ಡದಾಗದೇ ಗುಣಮಟ್ಟದ ಶಿಕ್ಷಣ ನೀಡಿ, ರ್ಯಾಂಕ್ ಪಡೆಯುವಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಈ ಬಾರಿ ರ್ಯಾಂಕಿನಲ್ಲಿ ಅಗ್ರ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ 5, ರಾಜ್ಯಶಾಸ್ತ್ರ ವಿಭಾಗದಲ್ಲಿ 5, ಎಂಕಾಂ ಸ್ನಾತಕೋತ್ತರ ಪದವಿಯಲ್ಲಿ ಎರಡು ರ್ಯಾಂಕ್ಗಳನ್ನು ಸೇರಿ 12 ರ್ಯಾಂಕ್ಗಳನ್ನು ಪಡೆದಿದೆ.
ಕಾಲೇಜು ಪ್ರಾಚಾರ್ಯ ಪ್ರೊ.ಡಿ. ಗಂಗಣ್ಣ ಮಾತನಾಡಿ, ಕಾಲೇಜಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ 12 ರ್ಯಾಂಕ್ಗಳು ಬಂದಿವೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿ 2ನೇ ಅತಿದೊಡ್ಡ ಕಾಲೇಜಾಗಿದೆ. ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಲೇಜು ಅರ್ಹತೆ ಪಡೆದಿದ್ದು, ರು. 1 ಕೋಟಿ ಅನುದಾನ ಕಳೆದ ವರ್ಷ ಮಂಜೂರಾಗಿದೆ.
ಕಾಲೇಜಿನಲ್ಲಿ ಎಂಎಸ್ಸಿ ಫಿಸಿಕ್ಸ್, ಎಂಎ ಕನ್ನಡ, ಇತಿಹಾಸ ಆರಂಭಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ. 12 ರ್ಯಾಂಕ್ ಬಂದಿರುವುದಕ್ಕೆ ಸಂತೋಷವಾಗಿದ್ದು, ಇನ್ನು ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಹುರಿದುಂಬಿಸಲಾಗುತ್ತದೆ. ಗುಣಾತ್ಮಕ ಶಿಕ್ಷಣದಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ.
ವಿದ್ಯಾರ್ಥಿಗಳ ಉತ್ತಮ ಸಾಧನೆ
ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮಹಾದೇವಿ ಪ್ರಥಮ ರ್ಯಾಂಕ್, ಟಿ. ಮೊಬೀನಾಬೇಗಂ ದ್ವಿತೀಯ, ರಾಮಾಂಜನಿ ಕೆ. ತೃತೀಯ, ಕೆ. ಅಶ್ವಿನಿ ನಾಲ್ಕನೇ, ಶಬಾನಾ ಬೇಗಂ 5ನೇ ರ್ಯಾಂಕ್ ಪಡೆದಿದ್ದಾರೆ. ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಜಮೀರಾ ಸುಲ್ತಾನಾ ಪ್ರಥಮ, ವೀಣಾ ದೇಸಾಯಿ ದ್ವಿತೀಯ, ನಾಗಭೂಷಣ್ ಬಿ. ತೃತೀಯ, ಸುಜಾತ ಎನ್. 4ನೇ, ಮಂಜುನಾಥ ಎನ್. 5ನೇ ರ್ಯಾಂಕ್ ಪಡೆದಿದ್ದಾರೆ. ಎಂಕಾಂ ಸ್ನಾತಕೋತ್ತರ ಪದವಿಯಲ್ಲಿ ಬೀಬಿ ಸಲೀಮಾ ಪ್ರಥಮ ರ್ಯಾಂಕ್, ಖಾಜಾಮೋಹಿದ್ದೀನ್ ತೃತೀಯ ರ್ಯಾಂಕ್ ಪಡೆದಿದ್ದಾರೆ.
-ಶಶಿಧರ ಮೇಟಿ