ಸಾಂಸ್ಕೃತಿಕ ಕಾರ್ಯಕ್ರಮ ಕಲೆ, ಸಂಸ್ಕೃತಿ ಉಳಿವಿಗೆ ಪೂರಕ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 24
ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಕಲೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ರಂಗಕಲಾವಿದ ನಾಡೋಜ ಬೆಳಗಲ್ ವೀರಣ್ಣ ಅವರು ತಿಳಿಸಿದರು.
ಅವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಎಐಡಿಎಸ್ಓ, ಓಡಿಐವೈಓ, ಎಐಎಂಎಸ್ಎಸ್ ಸಹಕಾರದೊಂದಿಗೆ ಶನಿವಾರ ಸಂಜೆ ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇಂತಹ ಕಾರ್ಯಕ್ರಮಗಳು ನಮ್ಮ ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಕಲೆಗಳಲ್ಲಿ ಬಳ್ಳಾರಿ ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ, ಜಿಲ್ಲೆಯ ಪ್ರಮುಖ ಕಲಾವಿದರಾದ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರು ಸೇರಿದಂತೆ ಇನ್ನಿತರೆ ಮಹಾನೀಯರು ನಾಟಕ, ಸಂಗೀತ, ಸಾಹಿತ್ಯದಲ್ಲಿ ತಮ್ಮದೇ ಆದ ಕೊಡುಗೆ ರಾಜ್ಯಕ್ಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಮೂವರು ಜಾನಪದ ಕಲಾವಿದರಿಗೆ ನಾಡೋಜ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರಲ್ಲದೆ, ರಂಗಗೀತೆ ಹಾಡುವ ಮೂಲಕ ನೆರೆದ ಪ್ರೇಕ್ಷಕರ ಮನ ಸೆಳೆದರು.
ಸಾಂಸ್ಕೃತಿಕ ಚಳವಳಿ ಅಗತ್ಯ: ಎಸ್ಯುಸಿಐನ ರಾಜ್ಯ ಸಮಿತಿ ಸದಸ್ಯೆ ಕೆ. ಉಮಾ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯಿಂದ ದಾರಿ ತಪ್ಪುತ್ತಿರುವ ಇಂದಿನ ಸಮಾಜದ ಯುವಪೀಳಿಗೆಗೆ ಸಾಂಸ್ಕೃತಿಯ ಚಳವಳಿಗಳು ಅಗತ್ಯವಾಗಿವೆ. ಸಾಂಘಿಕ ಜೀವನ ನಡೆಸುವ ಮನುಷ್ಯನಿಗೆ ಸಾಹಿತ್ಯ, ಸಂಗೀತ ಉತ್ಸವಗಳು ಅಗತ್ಯವಾಗಿವೆ. ಆರೋಗ್ಯಕರ ವಾತಾವರಣ ನಿರ್ಮಿಸಲು ಇಂತಹ ಕಾರ್ಯಕ್ರಮಗಳ ಪೂರಕವಾಗಿದೆ. ರಾಷ್ಟ್ರಕವಿ ರವೀಂದ್ರನಾಥ್ ಠಾಗೂರ್, ಪ್ರೇಮ್ನಾಥ್ ಅವರು ತಮ್ಮ ಸಾಹಿತ್ಯದಲ್ಲಿ ಇದನ್ನೇ ಹೇಳಿದ್ದಾರೆ ಎಂದರು.
ಕುಟುಂಬದೊಂದಿಗೆ ಸಿನಿಮಾಗಳನ್ನು ನೋಡುವ ದಿನಗಳು ಮಾಯವಾಗಿವೆ. ಅಶ್ಲೀಲ ಹಾಗೂ ಕೀಳು ಅಭಿರುಚಿಯ ಚಿತ್ರಗಳು ಹೆಚ್ಚಾಗಿ ಹೊರಬರುತ್ತಿವೆ, ಇದರಿಂದಾಗಿ ಕೌಟುಂಬಿಕ ಆಸಕ್ತಿಯುಳ್ಳ ಚಿತ್ರಗಳು ಮರೆಯಾಗುತ್ತಿವೆ. ಇನ್ನು ಟಿವಿಗಳಲ್ಲಿ ಮಿಡ್ನೈಟ್ ಮಸಾಲದಂತಹ ಕಾರ್ಯಕ್ರಮಗಳು ಯುವಪೀಳಿಗೆ ಅಡ್ಡದಾರಿ ತುಳಿಯಲು ಕಾರಣವಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಲು ಸಾಂಸ್ಕೃತಿಕ ಚಳವಳಿಗಳು ಅಗತ್ಯವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಮುಖ್ಯ ಅತಿಥಿಗಳಿಗೆ ಆವಿಷ್ಕಾರದಿಂದ ಸ್ಮರಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್, ಜಯಪ್ರಕಾಶ್ ಗುಪ್ತ, ಸೋಮಶೇಖರ ಗೌಡ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷ ಎಂ.ಎನ್. ಮಂಜುಳಾ, ಕಾರ್ಯದರ್ಶಿ ಭುವನೇಶ್ವರಿ, ನಾಗಲಕ್ಷ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.