ಕ್ಯಾಮರಾಮನ್ ಮೇಲೆ ಹಲ್ಲೆ: ಖಂಡನೆ
ಬಳ್ಳಾರಿ: ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮನ್ ಸುಬಾನ್ ಮೇಲೆ ಡಿಎಆರ್ ಡಿವೈಎಸ್ಪಿ ಹಲ್ಲೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಳ್ಳಾರಿಯ ಜರ್ನಲಿಸ್ಟ್ ಗಿಲ್ಡ್ ಹಾಗೂ ಪತ್ರಕರ್ತರು ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಎರಡು ದಿನಗಳ ಹಿಂದೆ ಬೀದಿ ಬದಿಯ ವ್ಯಾಪಾರಿಗಳ ಕುರಿತಾದ ಧರಣಿಯಲ್ಲಿ ಪಾಲ್ಗೊಂಡಿದ್ದ ಬಿಎಸ್ಸಾರ್ ಅಧ್ಯಕ್ಷ ಬಿ. ಶ್ರೀರಾಮುಲು ಅವರನ್ನು ಪೊಲೀಸರು ಬಂಧಿಸಿ ಡಿಎಆರ್ ಮೈದಾನಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಕ್ಯಾಮರಾಮನ್ ಸುಬಾನ್ ಅವರು ಡಿಎಆರ್ ಮೈದಾನಕ್ಕೆ ತೆರಳಿ ಸುದ್ದಿ ಮಾಡಲು ಮುಂದಾಗಿದ್ದಾರೆ. ಚಿತ್ರೀಕರಣ ಮಾಡದಂತೆ ತಡೆದ ಡಿಎಆರ್ ಡಿವೈಎಸ್ಪಿ ಅವರು ಕ್ಯಾಮರಾಮನ್ ಸುಬಾನ್.ಗೆ ಲಾಠಿಯಿಂದ ಹೊಡೆದಿದ್ದಾರೆ. ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರು ಹಾಗೂ ಕ್ಯಾಮರಾಮನ್.ಗಳ ಜೊತೆ ಸರಿಯಾಗಿ ವರ್ತಿಸಬೇಕು. ಪೊಲೀಸರೇ ವಿನಾಕಾರಣ ಗೊಂದಲ ಸೃಷ್ಟಿಸಬಾರದು ಎಂದು ತಿಳಿಸಿದರು. ಮನವಿ ಸ್ವೀಕರಿಸಿದ ಎಎಸ್ಪಿ ಸಿ.ಕೆ. ಬಾಬಾ, ಈ ಕುರಿತು ವಿಚಾರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಎಂ. ಅಹಿರಾಜ್, ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಇದ್ದರು.