ವಿಎಸ್.ಕೆ ವಿವಿಗೆ ಸಮರ್ಪಕ ಬಸ್.ಗಾಗಿ ಆಗ್ರಹ
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿಯಾಗಿ ಸಾರಿಗೆ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರ ಪ್ರದೇಶದಿಂದ 5 ಕಿಮೀ ದೂರದಲ್ಲಿರುವ ವಿವಿಗೆ ಸಾರಿಗೆ ಬಸ್ಸಿನ ತೊಂದರೆ ಹೆಚ್ಚಿದ್ದು, ಇರುವ ಒಂದು ಬಸ್ಸಿನಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚರಿಸಬೇಕಿದೆ. ಒಮ್ಮೊಮ್ಮೆ ಈ ಬಸ್ಸಿನಲ್ಲೇ ಸಂಚರಿಸುವುದರಿಂದ ಬಾಗಿಲುಗಳಿಗೆ ಜೋತು ಬಿದ್ದು ಸಂಚರಿಸುವಂತಾಗಿದೆ. ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದೇ ಬಸ್ಸಿನಲ್ಲಿ ಸಂಚರಿಸುತ್ತಿದ್ದಾರೆ, ಇದರಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ನಗರದ ದುರ್ಗಮ್ಮ ಗುಡಿ ವೃತ್ತ, ರಾಯಲ್ ವೃತ್ತ, ಮೋತಿ ವೃತ್ತ, ಕೌಲ್.ಬಜಾರ್, ರೇಡಿಯೋ ಪಾರ್ಕ್, ಸುಧಾ ಕ್ರಾಸ್.ಗಳಲ್ಲಿ ಈ ಬಸ್.ಗಾಗಿ ಕಾದು ಕುಳಿತಿರಬೇಕಾಗಿದೆ. ಬಸ್ ಬಾರದಿದ್ದರೆ ಕಾಲೇಜಿಗೆ ತಡವಾಗಿ ಹೋಗಬೇಕಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರತಿದಿನ ಬೆಳಗ್ಗೆ 8.30ಕ್ಕೆ, 10.30ಕ್ಕೆ, ಮಧ್ಯಾಹ್ನ 2.30ಕ್ಕೆ, ಸಂಜೆ 5.30ಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತೀವ್ರ ತೊಂದರೆ: ವಿಶ್ವವಿದ್ಯಾಲಯಕ್ಕೆ ಹೋಗುವ ರಸ್ತೆಯಲ್ಲಿಯೇ ವೀರಶೈವ ಕಾಲೇಜು, ಆರ್.ವೈಎಂಇಸಿ ಕಾಲೇಜ್, ಬಳ್ಳಾರಿ ಎಂಜಿನಿಯರಿಂಗ್ ಕಾಲೇಜಟ್ಹಾಐೂ ಹಲವು ಸರ್ಕಾರಿ ಇಲಾಖೆಗಳು ಇವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ಈ ರಸ್ತೆ ಮೂಲಕ ಸಂಚರಿಸಬೇಕಿದೆ. ತಡವಾದರೆ ದುಬಾರಿ ಆಟೋಗಳ ಮೊರೆಹೋಗಬೇಕಿದೆ ಎಂದರು.
ಇತ್ತೀಚೆಗೆ ಬಳ್ಳಾರಿ ನಗರಕ್ಕೆ 20ಕ್ಕೂ ಹೆಚ್ಚು ಬಸ್.ಗಳು ಬಂದಿದ್ದು, ಇದರಲ್ಲಿ ವಿವಿಗೆ 2 ಬಸ್.ಗಳನ್ನು ಬಿಡಬೇಕು. ವಿವಿ ಆವರಣದಲ್ಲಿ 15 ನಿಮಿಷಗಳ ಕಾಲ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಹೊಸಪೇಟೆ ರಸ್ತೆಯಲ್ಲಿ ಸಂಚರಿಸುವ ಇತರೆ ಊರುಗಳ ಬಸ್.ಗಳಿಗೂ ವಿದ್ಯಾರ್ಥಿಗಳಿಗಾಗಿ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ, ಮುದೇರೆಡ್ಡೆಪ್ಪ, ಅಂಬಳಿ ವೀರೇಂದ್ರ, ಸಂಜೀವಕುಮಾರ್, ನಾಗೇಂದ್ರ, ಗರುಡಪ್ಪ, ಉಮೇಶ್, ವೀಣಾ, ರೋಜಾ, ಮುರಳಿಕೃಷ್ಣ, ಶಾರದಮ್ಮ, ಗಗನಕುಮಾರ್, ಸುರೇಖಾ ಪೊಲೀಸ್ ಪಾಟೀಲ್, ಸಂಧ್ಯಾರಾಣಿ, ದಿವ್ಯಾ, ಶಿವಲೀಲಾ, ಶ್ರೀಲಕ್ಷ್ಮಿ, ಬಿ. ವೆಂಕಟೇಶ್, ರಮೇಶ್ ಸೇರಿದಂತೆ ವಿವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.