ಮುಂದುವರಿದ ವ್ಯಾಪಾರಿಗಳ ತೆರವು ಕಾರ್ಯ
ಬಳ್ಳಾರಿ: ನಗರದಲ್ಲಿ ರಸ್ತೆ ಬದಿಗಳ ಪಾದಚಾರಿ ರಸ್ತೆಗಳ ಮೇಲಿನ ಅಂಗಡಿ ಮುಂಗಟ್ಟುಗಳನ್ನು ಮಂಗಳವಾರ ತೆರವುಗೊಳಿಸಲಾಯಿತು. ಇಲ್ಲಿನ ಗಡಗಿ ಚನ್ನಪ್ಪ ವೃತ್ತದಿಂದ ಬೆಂಗಳೂರು ರಸ್ತೆಯ ಎಪಿಎಂಸಿ ವೃತ್ತದವರೆಗಿನ ಫುಟ್ಪಾತ್ ವ್ಯಾಪಾರಿಗಳನ್ನು ತೆರವು ಮಾಡಲಾಯಿತು. ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಸೂಚನೆ ಮೇರೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಅಂಗಡಿಗಳನ್ನು ತೆರವುಗೊಳಿಸಿದರು.
ಬೀದಿ ಬದಿಯ ಪಾದಚಾರಿ ರಸ್ತೆಯ ಮೇಲಿನ ಅಂಗಡಿಗಳಿಂದ ಪಾದಚಾರಿಗಳಿಗೆ ಸಂಚರಿಸಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೂ ಅಂಗಡಿ ಮಾಲೀಕರು ತೆರವಿಗೆ ಮುಂದಾಗಿರಲಿಲ್ಲ. ನಗರದ ನಾನಾ ಕಡೆಗಳಲ್ಲಿ ಈಗಾಗಲೇ ಫುಟ್ಪಾತ್ ವ್ಯಾಪಾರಿಗಳನ್ನು ತೆರವು ಮಾಡಲಾಗಿದ್ದು, ಮಂಗಳವಾರವೂ ಮುಂದುವರಿಯಿತು. ಫುಟ್ಪಾತ್ ವ್ಯಾಪಾರಿಗಳಿಗೆ ತೊಂದರೆ ಕೊಡುವ ಯಾವುದೇ ಉದ್ದೇಶ ನಮ್ಮದಲ್ಲ. ನ್ಯಾಯಾಲಯದ ಆದೇಶದಂತೆ ಪುಟ್ಪಾತ್ ವ್ಯಾಪಾರಿಗಳನ್ನು ತೆರವು ಮಾಡಲಾಗುತ್ತಿದೆ. ಪಾದಚಾರಿ ರಸ್ತೆಯಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.