ಲೋಕಾ ಪೊಲೀಸರಿಂದ ಅಹವಾಲು ಸ್ವೀಕಾರ
ಸಂಡೂರು: ಲೋಕಾಯುಕ್ತ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ್ ಅವರು ಬುಧವಾರ ಸಂಡೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದರು.
ಅಂಕಮನಾಳು ಕೆರೆ ನಿರ್ಮಾಣ ಹೋರಾಟ ಸಮಿತಿ ಹಾಗೂ ಯಶವಂತನಗರ ನಾಗರಿಕ ಸೇವಾ ಸಮಿತಿ ಸದಸ್ಯರಾದ ಎಂ. ವೀರಣ್ಣ, ಸಿ.ಜೆ. ಕೆಂಚನಗೌಡ ಇತರರು ಮನವಿ ಸಲ್ಲಿಸಿ, ಆ. 2010ರಲ್ಲಿ ಒಡೆದು ಹೋದ ತಾಲೂಕಿನ ಅಂಕಮನಾಳು ಕೆರೆಯ ಪುನರ್ ನಿರ್ಮಾಣ ಕಾರ್ಯ ಇದುವರೆಗೂ ಪ್ರಾರಂಭವಾಗಿಲ್ಲ. ಕೆರೆ ಒಡೆದು ಹೋಗಿರುವುದರಿಂದ ಗ್ರಾಮದ ಸುತ್ತಮುತ್ತಲು ಅಂತರ್ಜಲದ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ನೀರು ದೊರೆಯದಂತಾಗಿದೆ. ಅಲ್ಲದೆ ತಾಲೂಕಿನ ಯಶವಂತನಗರ ಹಾಗೂ ಸುತ್ತಲಿನ ಗ್ರಾಮದ ರಸ್ತೆಗಳು ಹದಗೆಟ್ಟಿದ್ದು, ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಇವುಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಗ್ರಾಮದ ಮೂಲಕ ಗೂಡ್ಸ್ ಗಾಡಿಗಳು ಸಂಚರಿಸುತ್ತಿದ್ದರೂ, ಪ್ರಯಾಣಿಕರ ರೈಲು ವ್ಯವಸ್ಥೆ ಮಾಡಿಲ್ಲವೆಂದು ಆರೋಪಿಸಿ, ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು, ಬೇಡಿಕೆಗಳ ಈಡೇರಿಕೆಗೆ ಸಹಕರಿಸಬೇಕೆಂದು ಕೋರಿದರು.
ತಾಲೂಕಿನ ಕೃಷ್ಣನಗರ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ವಿಶ್ವ ಬ್ಯಾಂಕ್ ಯೋಜನೆಯಡಿ 2010ರಲ್ಲಿ ಸುಮಾರು ಒಂದುವರೆ ಕಿ.ಮೀ. ಉದ್ದಕ್ಕೆ ಹಾಕಲಾಗಿದ್ದ ಪೈಪ್‌ಗಳನ್ನು ಸರಿ ಇಲ್ಲವೆಂದು ನಿರ್ಧರಿಸಿ, ಪೈಪ್‌ಗಳನ್ನು ಕಿತ್ತು ಮಾರಾಟ ಮಾಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಪಂಚಾಯಿತಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಈ ಕುರಿತಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿ ಸತೀಶ್, ಇಮಾಮ್ ಬಾಷ, ಪ್ರವೀಣ್ ಮುಂತಾದವರು ಲೋಕಾಯುಕ್ತ ಸಿಪಿಐ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.