ಏ. 2ರಂದು ಉಪನ್ಯಾಸ
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗವು ಏ. 2ರಂದು ಬೆಳಗ್ಗೆ 11ಕ್ಕೆ ಕಾಂಟೆಸ್ಟಿಂಗ್ ಲ್ಯಾಂಗ್ವೇಜ್ ವಿತಿನ್ ನ್ಯಾಷನಲಿಸ್ಟ್ ಡಿಸ್ಕೋರ್ಸ್ ಎಂಬ ವಿಷಯ ಕುರಿತು ಉಪನ್ಯಾಸವನ್ನು ವಿವಿಯ ಸೆಮಿನಾರ್ ಹಾಲ್,ನಲ್ಲಿ ಹಮ್ಮಿಕೊಂಡಿದೆ. ಅಂತರವಿಭಾಗ ವಿಚಾರ ವಿನಿಮಯ ಯೋಜನೆಯಡಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾಷಾ ನಿಕಾಯದ ಡೀನ್ ಡಾ. ರಾಬರ್ಟ್ ಜೋಷ್ ಉಪನ್ಯಾಸ ನೀಡುವರು. ಆದ್ದರಿಂದ ರಾಜ್ಯಶಾಸ್ತ್ರ ವಿಭಾಗದ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ. ಸೋಮಶೇಖರ್ ತಿಳಿಸಿದ್ದಾರೆ.
ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ
ಬಳ್ಳಾರಿ: ವಿದ್ಯಾರ್ಥಿಗಳು ರಾಷ್ಟ್ರಭಕ್ತಿ ಹಾಗೂ ರಾಷ್ಟ್ರೀಯ ಭಾವೈಕ್ಯದ ಜತೆಗೆ ಸಕಾರಾತ್ಮಕ ಚಿಂತನೆ ಬೆಳಿಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜನಾಧಿಕಾರಿ ಡಾ.ಎಚ್. ರಾಮಕೃಷ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಮೋಕಾ ಸರ್ಕಾರಿ ಪದವಿ ಕಾಲೇಜಿನಿಂದ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರದ ನಿರ್ದೇಶಕ ಡಿ. ದೇವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಎ. ಹೇಮಣ್ಣ ಶಿಬಿರಾರ್ಥಿಗಳಿಗೆ ಎನ್ನೆಸ್ಸೆಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರಮದಾನದ ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಶಿಬಿರಾರ್ಥಿಗಳಿಂದ ನಡೆದವು. ಈ ವೇಳೆ ವಿಶ್ವನಾಥಸ್ವಾಮಿ, ತಂಬ್ರಹಳ್ಳಿ ಗ್ರಾಮದ ಹಿರಿಯ ಮುಖಂಡರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಿ.ಜಿ. ಮಂಜುನಾಥ ರಾವ್, ಎನ್. ಸತ್ಯವತಿ, ಬಿ. ಶ್ರೀದೇವಿ, ವೀರೇಶಯ್ಯ, ನಾಗರಾಜ, ಕೆ. ವಲಿಭಾಷಾ ಇತರರು ಇದ್ದರು. ಎನ್ನೆಸ್ಸೆಸ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಎನ್ನೆಸ್ಸೆಸ್ ವಿಶೇಷ ಶಿಬಿರ
ಬಳ್ಳಾರಿ: ಗ್ರಾಮಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕುರುಗೋಡು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಪ್ಪ ಅಭಿಪ್ರಾಯಪಟ್ಟರು. ನಗರದ ಶ್ರೀಮತಿ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಪ್ರತಿ ಕುಟುಂಬವು ಮೊದಲು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಆವಶ್ಯಕತೆ ಇದೆ. ಆ ಮೂಲಕ ಸಮಾಜದಲ್ಲಿ ಮೂಢನಂಬಿಕೆಯನ್ನು ತೊಲಗಿಸಲು ಸಾಧ್ಯವಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಎಂ. ಸೋಮಶೇಖರ, ಈಡಿಗರ ಮುರಳಿಶಂಕರಗೌಡ ಸೇರಿದಂತೆ ಗ್ರಾಮದ ಮುಖಂಡರು ಇದ್ದರು. ರಾಜೇಶ್ವರಿ ಪ್ರಾರ್ಥಿಸಿ, ಹುಲುಗಪ್ಪ ಸ್ವಾಗತಿಸಿ, ಮಹೇಶ ನಿರೂಪಿಸಿ, ಯಂಕಪ್ಪ ವಂದಿಸಿದರು.
ವಿಶ್ವ ರಂಗಭೂಮಿ ದಿನಾಚರಣ: ಸನ್ಮಾನ
ಬಳ್ಳಾರಿ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸಂಸ್ಕೃತಿ ಪ್ರಕಾಶನ ಮತ್ತು ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯಿಂದ ಇಲ್ಲಿನ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ, ರಂಗಕಲಾವಿದ ಡಾ. ಪಿ.ಎಲ್. ಗಾದಿಲಿಂಗಪ್ಪರನ್ನು ಸನ್ಮಾನಿಸಲಾಯಿತು.
ಗಾದಿಲಿಂಗಪ್ಪ ನಿವಾಸಕ್ಕೆ ತೆರಳಿದ ವೇದಿಕೆ ಅಧ್ಯಕ್ಷ ಸಿ. ಮಂಜುನಾಥ್ ಮತ್ತಿತರರು ಗಾದಿಲಿಂಗಪ್ಪ ದಂಪತಿಗಳನ್ನು ಸನ್ಮಾನಿಸಿದರು. ನಂತರ ಮಾತನಾಡುತ್ತಾ, ಕನ್ನಡ ರಂಗಭೂಮಿಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ರಂಗ ಕಲೆಗೆ ಬಳ್ಳಾರಿ ಜಿಲ್ಲೆಯ ಜನತೆ, ಸಂಘ ಸಂಸ್ಥೆಗಳು ಯಾವತ್ತೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು. ಈ ವೇಳೆ ಪಶುವೈದ್ಯಾಧಿಕಾರಿ ಡಾ.ಟಿ. ಶಶಿಧರ್, ನವಕರ್ನಾಟಕ ಯುವಶಕ್ತಿ ಜಿಲ್ಲಾಧ್ಯಕ್ಷ ಬಿ. ಚಂದ್ರಶೇಖರ ಆಚಾರ್, ಕನ್ನಡ ಸೇನೆಯ ಹ.ಬೊ.ಹಳ್ಳಿ ತಾಲೂಕು ಘಟಕ ಅಧ್ಯಕ್ಷ ಸಿ. ಹಾಲೇಶ್, ಸ್ನೇಹ ಸಂಪುಟದ ಧನಂಜಯ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್, ಪಶುವೈದ್ಯ ಪರೀಕ್ಷಕ ಶಂಭುಲಿಂಗ ಕುಮಾರ್, ರಂಗ ಕಲಾವಿದ ಅಮರೇಶ್ ಮತ್ತಿತ್ತರು ಇದ್ದರು.
ಜಾನೆಕುಂಟೆಗೆ ಪ್ರತ್ಯೇಕ ಬಸ್ ನೀಡಿ
ಬಳ್ಳಾರಿ: ತಾಲೂಕಿನ ಜಾನೆಕುಂಟೆ ಗ್ರಾಮಕ್ಕೆ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮಾಂತರ ಘಟಕ ಕಾರ್ಯಕರ್ತರು ಇಲ್ಲಿನ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಾನೆಕುಂಟೆಗೆ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹರಗಿನಡೋಣಿ ಗ್ರಾಮಕ್ಕೆ ಪ್ರತಿದಿನ ಸಂಜೆ 5.30ಕ್ಕೆ ಹೊರಡುವ ಬಸ್,ನ್ನು ಜಾನೆಕುಂಟೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಬೇಕು. ಬೆಳಗ್ಗೆ 7ಕ್ಕೆ ಜಾನೆಕುಂಟೆ ತಾಂಡಾಕ್ಕೆ ತೆರಳುವ ಬಸ್ ಸ್ಥಗಿತಗೊಳಿಸಿ ಪ್ರತ್ಯೇಕವಾಗಿ ಜಾನೆಕುಂಟೆ ಗ್ರಾಮಕ್ಕೆ ಒದಗಿಸಿದಲ್ಲಿ ತುಂಬ ಅನುಕೂಲವಾಗುತ್ತದೆ ವೇದಿಕೆ ತಾಲೂಕಾಧ್ಯಕ್ಷ ಜೆ.ಎಂ. ಬಸವರಾಜ ಸ್ವಾಮಿ ಆಗ್ರಹಿಸಿದ್ದಾರೆ.
ತರಬೇತಿ ಕಾರ್ಯಾಗಾರ
ಬಳ್ಳಾರಿ: ನಗರದ ಅಲ್ಲಂ ಕರಿಬಸಪ್ಪ ಇನ್,ಸ್ಟಿಟ್ಯೂಟ್ ಆಫ್ ಮ್ಯಾನೇಜ್,ಮೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಇನ್,ಸ್ಟಿಟ್ಯೂಟ್ ಆಫ್ ಮ್ಯಾನೇಜ್,ಮೆಂಟ್ನ ನಿವೃತ್ತ ಪ್ರಾಧ್ಯಾಪಕ ಎಸ್.ಎಲ್. ಶಾಸ್ತ್ರಿ ಸಂಖ್ಯಾಶಾಸ್ತ್ರ ಸಂಬಂಧಿಸಿದ ತಂತ್ರಗಳು, ಆರ್ಥಿಕ ವ್ಯವಸ್ಥೆ, ವ್ಯಾಪಾರ ನಿರೀಕ್ಷಣೆ, ವಸ್ತುಗಳ ಸ್ವಭಾವ ಇತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವ್ಯಾಸಂಗ ಮುಗಿದ ಬಳಿಕ ಉದ್ಯೋಗ ಹುಡುಕುತ್ತಾ ಸಮಯ ವ್ಯರ್ಥ ಮಾಡದೆ, ಸ್ವಉದ್ಯೋಗ ಕಲ್ಪಿಸಿಕೊಳ್ಳಬೇಕೆಂದರು.
ಗೃಹರಕ್ಷಕರಿಗೆ ಸಂಚಾರ ನಿಯಂತ್ರಣ ತರಬೇತಿ
ಬಳ್ಳಾರಿ: ಗೃಹರಕ್ಷಕ ದಳದಿಂದ ಜಿಲ್ಲೆಯ ವಿವಿಧ ಘಟಕದ ಗೃಹರಕ್ಷಕರಿಗಾಗಿ ಸಂಚಾರ ನಿಯಂತ್ರಣ ತರಬೇತಿ ಸಮಾರೋಪ ಸಮಾರಂಭವನ್ನು ನಗರದ ಡಿಎಆರ್ ಕವಾಯತು ಮೈದಾನದಲ್ಲಿ ನಡೆಸಲಾಯಿತು. ಡಿವೈಸ್ಪಿ ಮುರುಗಣ್ಣ ಮಾತನಾಡಿ, ತರಬೇತಿ ಪಡೆದ ಗೃಹರಕ್ಷಕರು ಸಂಚಾರ ನಿಯಂತ್ರಣ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕೆಂದರು. ಸಂಚಾರಿ ಪೊಲೀಸ್ ಇನ್,ಸ್ಪೆಕ್ಟರ್ ವಸಂತ್ ಕುಮಾರ್, ಎಎಸ್,ಐ ಹುಸೇನ್ ಸಾಬ್, ಬಳ್ಳಾರಿ ಘಟಕಾಧಿಕಾರಿ ಜಿ. ಬಸವರಾಜ್, ಜೆ. ಸುರೇಶ್, ಬಸವಲಿಂಗ, ಗೃಹರಕ್ಷಕರು ಭಾಗವಹಿಸಿದ್ದರು. ಸೆಕೆಂಡ್ ಇನ್ ಕಮಾಂಡ್ ಎನ್.ಎಸ್. ಲಕ್ಷ್ಮೀನರಸಿಂಹ ಸ್ವಾಗತಿಸಿದರು. ಸಹ ಬೋಧಕ ಎಚ್. ತಿಪ್ಪೇಸ್ವಾಮಿ ನಿರೂಪಿಸಿ, ವಂದಿಸಿದರು. ಕೆ.ಎಂ. ಐಶ್ವರ್ಯ ವರದಿ ವಾಚಿಸಿದರು.
ಮಾನಸಿಕ ಅಸ್ವಸ್ಥ ಕಾಣೆ: ದೂರು
ಬಳ್ಳಾರಿ: ಇಲ್ಲಿನ ಬೂಸ್,ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಕಾಣೆಯಾಗಿದ್ದಾನೆಂದು ಪಿಎಸ್,ಐ ತಿಳಿಸಿದ್ದಾರೆ. ಏಕಾಂತ ರೆಡ್ಡಿ ಎಂಬ ವ್ಯಕ್ತಿಯೇ ಕಾಣೆಯಾಗಿದ್ದು, ಈತನು ನಗರದ ರೆಡ್ಡಿ ಬೀದಿಯಲ್ಲಿರುವ ತನ್ನ ಮನೆಯಿಂದ ಮಾ. 8ರಂದು ಬೆಳಗ್ಗೆ 5 ಗಂಟೆಗೆ ಟೀ ಕುಡಿದು ಬರುತ್ತೇನೆಂದು ಹೋದವ ಮರಳಿ ಬಂದಿಲ್ಲ. ಈ ಹಿಂದೆ 2-3 ಬಾರಿ ಮನೆ ಬಿಟ್ಟು ಹೋಗಿ 10-15 ದಿನಗಳಾದ ಅನಂತರ ಮನೆಗೆ ವಾಪಸ್ ಬಂದಿದ್ದು, ಈ ಬಾರಿ ಈ ವರೆಗೂ ಬಂದಿರುವುದಿಲ್ಲ ಎಂದು ಆತನ ಹೆಂಡತಿ ಸಾವಿತ್ರಿ ಠಾಣೆಗೆ ದೂರು ನೀಡಿದ್ದಾರೆ. ಏಕಾಂತ ರೆಡ್ಡಿ 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಉದ್ದನೆ ಮೂಗು, ಬಿಳಿ ಮಿಶ್ರಿತ ಕಪ್ಪು ತಲೆಗೂದಲು ಹೊಂದಿರುತ್ತಾನೆ. ಮಾತನಾಡುವಾಗ ಸ್ಪಲ್ಪ ತೊದಲುತ್ತಾನೆ. ಗೋದಿ ಬಣ್ಣದ ಚೆಕ್ಸ್ ಶರ್ಟ್, ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಮಾತನಾಡಲು ಬರುತ್ತದೆ. ಈತನ ಬಗ್ಗೆ ಮಾಹಿತಿ ದೊರೆತವರು ಕೂಡಲೇ ದೂರವಾಣಿ ಸಂಖ್ಯೆ 9591302519 ಸಂಪರ್ಕಿಸಬೇಕು ಎಂದು ಬ್ರೂಸ್,ಪೇಟೆ ಪಿಎಸ್,ಐ ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.