ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೈ ಟಿಕೆಟ್ಗಾಗಿ ಆಕಾಂಕ್ಷಿಗಳು ದೆಹಲಿಗೆ

Rashmi Kasaragodu
Updated On : 31 Mar 2013, 11:56 am

ವಿಶೇಷ ವರದಿ
ಹಗರಿಬೊಮ್ಮನಹಳ್ಳಿ: ನಾಮಪತ್ರ ಸಲ್ಲಿಸಲು ಕ್ಷಣಗಣನೆ ಆರಂಭವಾಗಿರುವಾಗ ಇತ್ತ ಪರಿಶಿಷ್ಟ ಜಾತಿಗೆ ಮೀಸಲಾದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಬಹುತೇಕ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಸಹಿತ ದೆಹಲಿಯಲ್ಲಿ ಬೀಡುಬಿಟ್ಟು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಇಲ್ಲಿವರೆಗೆ ಬೆಂಗಳೂರಿಗೆ ಸೀಮಿತವಾಗಿದ್ದ ಕೈ ಪಾಳೆಯದ ರಾಜಕೀಯ ಸದ್ಯ ದೆಹಲಿಗೆ ಶಿಫ್ಟ್ ಆಗಿದೆ.
ಕೆಪಿಸಿಸಿ ಸದಸ್ಯ ಎಸ್. ಕೃಷ್ಣನಾಯ್ಕ, ಬಳ್ಳಾರಿ ಮಾನಯ್ಯ, ಜಿಪಂ ಸದಸ್ಯೆ ಹೇಮ್ಲವ್ವ ಅವರ ಪತಿ ರಾಯರಾಳು ತಾಂಡ ಕೃಷ್ಣನಾಯ್ಕ ಸೇರಿದಂತೆ ಹಲವು ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಸಮೇತರಾಗಿ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್ಗಾಗಿ ದುಂಬಾಲು ಬಿದ್ದಿದ್ದಾರೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಕೃಷ್ಣನಾಯ್ಕ, ಪಕ್ಷದ ಹಿರಿಯರಾದ ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಅನಿಲ್ ಲಾಡ್ ಸೇರಿದಂತೆ ಹಲವು ಹಿರಿಯ ಮುಖಂಡರನ್ನು ಭೇಟಿಯಾಗಿ ತಮ್ಮ ಪತ್ನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿರುವೆ. ಟಿಕೆಟ್ ನೀಡುವ ಭರವಸೆಯನ್ನು ವರಿಷ್ಟರು ನೀಡಿರುವುದಾಗಿ ತಿಳಿಸಿದರು.
ಇದಲ್ಲದೆ ಕೆಪಿಸಿಸಿ ಸದಸ್ಯ ಮರಿಯಮ್ಮನಹಳ್ಳಿಯ ಎಸ್. ಕೃಷ್ಣನಾಯ್ಕ ದೆಹಲಿಗೆ ಹೋಗಿದ್ದು, ಈ ಸಲ ತಮಗೆ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅವರ ಆಪ್ತರಾದ ಕೃಷ್ಣನಾಯ್ಕಗೆ ಟಿಕೆಟ್ ಕೊಡಿಸಲು ಲಾಡ್ ಹೈಕಮಾಂಡ್ ಮೇಲೆ ತಮ್ಮ ಪ್ರಭಾವ ಬೀರಿದ್ದಾರೆ ಎನ್ನಲಾಗುತ್ತಿದೆ. ಇದೇ ರೀತಿ ಬಳ್ಳಾರಿಯ ಮಾನಯ್ಯ ಸಹ ದೆಹಲಿಯಲ್ಲಿ ಬಿಡಾರ ಹೂಡಿ ಟಿಕೆಟ್ಗೆ ಕಸರತ್ತು ಆರಂಭಿಸಿದ್ದಾರೆ.
ಹೀಗಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೈ ಟಿಕೆಟ್ ರಾಜಕೀಯ ದೆಹಲಿಗೆ ಶಿಫ್ಟ್ ಆಗಿದೆ. ಆದರೆ ಇವರಲ್ಲಿ ಟಿಕೆಟ್ ಯಾರಿಗೆ ಸಿಗುತ್ತದೆ? ಕಾದು ನೋಡಬೇಕು.
ಕಣ್ಣು ತೆರೆಯದ ಕೆಜೆಪಿ: ರಾಜ್ಯಾದ್ಯಂತ ಮಾಜಿ ಸಿಎಂ ಯಡಿಯೂರಪ್ಪ ಅವರ ಕೆಜೆಪಿ ಪಕ್ಷದ ಸದ್ದುಗದ್ದಲ ಜೋರಾಗಿದ್ದರೆ ಇತ್ತ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಾತ್ರ ಇದುವರೆಗೂ ಕೆಜೆಪಿ ಕಣ್ಣು ತೆರೆದಿಲ್ಲ. ಚುನಾವಣೆ ದಿನಾಂಕ ಪ್ರಕಟವಾಗಿದ್ದರೂ ಪಕ್ಷದ ಯಾವುದೇ ಕಾರ್ಯ ಚಟುವಟಿಕೆ ಆರಂಭವಾಗಿಲ್ಲ. ಒಂದರ್ಥದಲ್ಲಿ ಇಲ್ಲಿ ಕೆಜೆಪಿ ಪೂರ್ತಿ ಖಾಲಿ ಖಾಲಿ. ನಾಮಪತ್ರ ಸಲ್ಲಿಕೆಗೆ ದಿನ ಹತ್ತಿರವಾಗುತ್ತಿದ್ದರೂ ಕ್ಷೇತ್ರದಲ್ಲಿ ಕೆಜೆಪಿ ಟಿಕೆಟ್ ಆಕಾಂಕ್ಷಿಗಳೇ ಹುಟ್ಟಿಕೊಂಡಿಲ್ಲ. ಇದನ್ನು ನೋಡಿದರೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕೆಜೆಪಿ ಸ್ಪರ್ಧಿಸುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕೆಜೆಪಿಗೆ ನೇಮಿರಾಜ್?: ಈ ಮಧ್ಯೆ ಪಟ್ಟಣದವರೇ ಆದ ವೀರಶೈವ ಪಂಚಮಸಾಲಿ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ ಅವರನ್ನು ಕೆಜೆಪಿ ಹಿರಿಯ ರಾಜ್ಯ ಉಪಾಧ್ಯಕ್ಷರನ್ನಾಗಿ ಯಡಿಯೂರಪ್ಪ ಅವರೇ ನೇಮಕ ಮಾಡಿದ್ದರು. ಯಡಿಯೂರಪ್ಪ ಅವರ ಅಪ್ತವಲಯದಲ್ಲಿ ಗುರುತಿಸಿಕೊಂಡಿರುವ ಬಾವಿ ಬೆಟ್ಟಪ್ಪ ಅವರು ಇಲ್ಲಿಯ ತನಕ ಕೆಜೆಪಿಯ ರಾಜಕೀಯ ಚಟುವಟಿಕೆಯನ್ನು ಆರಂಭಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಬಿಜೆಪಿ ಶಾಸಕ ಕೆ. ನೇಮಿರಾಜ ನಾಯ್ಕ್ ಅವರನ್ನೆ ಕೆಜೆಪಿಯತ್ತ ಸೆಳೆದು ಅವರನ್ನೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಬಾವಿ ಬೆಟ್ಟಪ್ಪ ರಣತಂತ್ರ ರೂಪಿಸುತ್ತಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಆದರೆ ಶಾಸಕ ನೇಮಿರಾಜ ನಾಯ್ಕ್ ಮಾತ್ರ ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕೆಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement