ಅಸಮರ್ಪಕ ವಿದ್ಯುತ್: ರೈತರ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ: ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಹಾಗೂ ನಿರಂತರ ವಿದ್ಯುತ್ ಸರಬಾರಾಜಿಗೆ ಒತ್ತಾಯಿಸಿ ತಾಲೂಕಿನ ತಂಬ್ರಹಳ್ಳಿ ಹೊಬಳಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ತಂಬ್ರಹಳ್ಳಿ ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ ಶನಿವಾರ ರಾತ್ರಿ ಮುತ್ತಿಗೆ ಹಾಕಿ, ಘಟಕದ ಮುಖ್ಯ ದ್ವಾರ ಬಂದ್ ಮಾಡಿ ಆಹೋರಾತ್ರಿ ಪ್ರತಿಭಟನೆ ನಡೆಸಿದರು.
ತಾಲೂಕಿನ ತಂಬ್ರಹಳ್ಳಿ, ಉತ್ತರ ತಂಬ್ರಹಳ್ಳಿ, ಮುತ್ಕೂರು, ಕಿತ್ನೂರು, ರಾಮೇಶ್ವರಬಂಡಿ, ತೆಲುಗೋಳಿ, ಸಿಗೇನಹಳ್ಳಿ, ಬನ್ನಿಗೋಳ, ಕೃಷ್ಣಾಪುರ, ಬಸರಕೋಡು, ಬಸರಕೋಡು ತಾಂಡ, ಬನ್ನಿಕಲ್ಲು, ಚಿಲುಗೋಡು ಸೇರಿದಂತೆ ವಿವಿಧ ಗ್ರಾಮಗಳಿಗೆ ಸೇರಿದ ನೂರಾರು ರೈತರು ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ನಮ್ಮ ಬೆಳೆಗಳು ಸಂಪೂರ್ಣ ಒಣಗಿ ಹೋಗಿ ನಾವು ಲಕ್ಷಾಂತರ ರು. ನಷ್ಟ ಅನುಭವಿಸುವಂತಾಗಿದೆ. ನಮ್ಮ ಬೆಳೆ ನಷ್ಟಕ್ಕೆ ಪರಿಹಾರ ಕೊಡಿ ಇಲ್ಲವೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿ ಎಂದು ಆಗ್ರಹಿಸಿದರು.
ಮುತ್ತಿಗೆ ನಿರತನ್ನುದ್ದೇಶಿಸಿ ರೈತ ಮುಖಂಡ ಅಂಗಡಿ ಗವಿಸಿದ್ದಪ್ಪ ಮಾತನಾಡಿ, ಈ ಭಾಗದಲ್ಲಿ ಪಂಪ್ಸೆಟ್ ಆಧಾರಿತ ರೈತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಆಟದಿಂದಾಗಿ ಈ ಭಾಗದ ರೈತರು ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಪ್ರತಿ ರೈತ ಕುಟುಂಬದ ಮೇಲೆ ಲಕ್ಷಾಂತರ ರು. ಬೆಳೆಸಾಲದ ಹೊರೆಯ ಭಾರ ಅಧಿಕವಾಗಿದೆ.
ವಿದ್ಯುತ್ ಕಂಪನಿಗಳ ಕಳ್ಳಾಟದಿಂದ ಮತ್ತು ರೈತ ವಿರೋಧಿ ನೀತಿಗಳಿಂದಾಗಿ ಇವತ್ತು ನಮ್ಮ ರೈತರು ಸಾಲದ ಸುಳಿಗೆ ಸಿಕ್ಕು ಸಾಯುವಂತಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ಆಗುವ ತನಕ ನಾವು ಮುತ್ತಿಗೆ ನಿಲ್ಲಿಸುವುದಿಲ್ಲ ಎಂದರು.
ಲಿಖಿತ ಭರವಸೆ: ಜೆಸ್ಕಾಂ ಅಧಿಕಾರಿಗಳು ಏನೇ ಭರವಸೆ ನೀಡಿದರೂ ಪ್ರತಿಭಟನಾಕಾರರು ಅವರಿಗೆ ಸೊಪ್ಪು ಹಾಕದಿದ್ದರಿಂದ ಕೊನೆಗೆ ಭಾನುವಾರ ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಹೊಸಪೇಟೆ ವಿಭಾಗದ ಇಇ ಜಗದೀಶ, ಹಗರಿಬೊಮ್ಮನಹಳ್ಳಿ ಜೆಸ್ಕಾಂ ಎಇಇ ಮೊಟ್ಲಾನಾಯ್ಕ ಹಾಗೂ ಇಟಿಗಿ ಕೆಪಿಟಿಸಿಎಲ್ ಎಇಇ ರಾಘವೇಂದ್ರ ಅವರು ಹಗಲು ಮತ್ತು ರಾತ್ರಿ ವೇಳೆ ತಲಾ 3 ತಾಸು ತ್ರಿಫೇಸ್ ಹಾಗೂ 5 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುವುದು. ಒಂದು ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಲ್ಲಿ ನಿಲುಗಡೆಯಾದರೆ ನಂತರ ಅದನ್ನು ಸರಿದೂಗಿಸಿಕೊಡಲಾಗುವುದು ಎಂದು ಲಿಖಿತ ಭರವಸೆ ನೀಡಿದ ಮೇಲೆ ರೈತರು ಮುತ್ತಿಗೆಯನ್ನು ಅಂತ್ಯಗೊಳಿಸಿದರು.
ಅಸ್ತವ್ಯಸ್ತ: ತಂಬ್ರಹಳ್ಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಪರಿಣಾಮ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗಿನ ವರೆಗೂ ತಂಬ್ರಹಳ್ಳಿ ವ್ಯಾಪ್ತಿಯ ವಿದ್ಯುತ್ ಪೂರೈಕೆ ತೀವ್ರ ಅಸ್ತವ್ಯಸ್ತವಾಗಿತ್ತು.
ತಾಲೂಕಿನ ಬನ್ನಿಗೋಳ ಬಳಿಯ ತುಂಗಾಭದ್ರ ನದಿಯಿಂದ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳಿಗೆ ನೀರು ಪೂರೈಕೆ ಮಾಡುವ ಘಟಕದ ವಿದ್ಯುತ್ ಪೂರೈಕೆಯನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದ್ದರಿಂದ ಈ ಮೂರು ಪಟ್ಟಣಗಳ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆ ಕಾಣಿಸಿಕೊಂಡಿತ್ತು.
ರೈತ ಮುಖಂಡರಾದ ಮುತ್ಕೂರು ಮಾರುತೇಶ, ಬನ್ನಿಗೋಳ ವೆಂಕಣ್ಣ, ಬಸವರೆಡ್ಡಿ, ಆನಂದರೆಡ್ಡಿ, ಅಕ್ಕಿ ತೋಟೇಶ, ಪಿ. ಸುರೇಶ, ಬಣಕಾರ ಕೊಟ್ರೇಶ್, ತೋಟಪ್ಪ, ಗೌರಜ್ಜನವರ ಬಸವರಾಜಪ್ಪ, ಗಿರೀಶ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.