ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೂಡ್ಲಿಗಿಯಲ್ಲಿ ಕದನ ಕುತೂಹಲ

Vishwanath S
Updated On : 1 Apr 2013, 11:09 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 31
1962ರಲ್ಲಿ ನಡೆದ ಆರಂಭದ ಚುನಾವಣೆಯಲ್ಲಿ ಪಕ್ಷೇತರರನ್ನು ಕೈ ಹಿಡಿದಿತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ. ಪ್ರಥಮ ಬಾರಿಗೆ ಕಾಂಗ್ರೆಸ್ ಮುಖಭಂಗ ಅನುಭವಿಸಿದರೂ, ಕ್ಷೇತ್ರದಲ್ಲಿ ನಡೆದ 11 ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 5 ಬಾರಿ ಗೆಲವು ಸಾಧಿಸುವ ಮೂಲಕ ಪ್ರಭುತ್ವ ಸಾಧಿಸಿತ್ತು. ಆದರೆ, ಕಳೆದ ಎರಡು ಅವಧಿಯಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು.
ಈ ಬಾರಿ ಬಿಜೆಪಿ ಶಾಸಕ ನಾಗೇಂದ್ರ ಅವರು ಬಿಜೆಪಿಯಿಂದ ದೂರ ಸರಿದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆ ತೀರಾ ಕುತೂಹಲದಿಂದ ಕೂಡಿದೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ 11 ಚುನಾವಣೆಗಳು ನಡೆದಿದ್ದು, ಅದರಲ್ಲಿ ಕಾಂಗ್ರೆಸ್ 5 ಬಾರಿ ಗೆಲುವು ಸಾಧಿಸಿದ್ದರೆ,  ಬಿಜೆಪಿ 2 ಬಾರಿ ಗೆಲವು ಸಾಧಿಸಿದೆ. ಪಕ್ಷೇತರ 1, ಎನ್‌ಸಿಓ 1, ಜೆಎನ್‌ಪಿ 1, ಜನತಾದಳ 1 ಬಾರಿ ಗೆಲವು ಸಾಧಿಸಿವೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿಕೊಂಡರೆ ಕಾಂಗ್ರೆಸ್ ಪ್ರಾಬಲ್ಯ ಕೊಂಚ ಕಡಿಮೆ ಆದರೂ ಗೆಲುವಿನಲ್ಲಿ ಮುಂದು.
1962ರಿಂದ ಕೂಡ್ಲಿಗಿ ವಿಧಾನಸಭೆಯಲ್ಲಿ ಚುನಾವಣೆ ಆರಂಭವಾಗಿದ್ದು, ಮೊದಲ ಬಾರಿಗೆ ಕೂಡ್ಲಿಗಿ ಕ್ಷೇತ್ರದ ಮತದಾರ ವಿ. ನಾಗಪ್ಪ ಅವರನ್ನು ಕೈ ಹಿಡಿದಿದ್ದಾರೆ. ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಸವ್ವ ಅವರನ್ನು 6,983 ಮತಗಳ ಅಂತರದಿಂದ ಸೋಲಿಸಿದರು.
402 ಮತಗಳಿಂದ ಸೋತ ಬೊಮ್ಮಣ್ಣ: 1967ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಎಂ.ಎಂ.ಜೆ. ಸದ್ಯೋಜಾತ ಅವರು ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆಲವು ಸಾಧಿಸಿ, ಕಾಂಗ್ರೆಸ್ ಪಕ್ಷಕ್ಕೆ ಅಂಕಿತ ಹಾಕಿದರು. ಆದರೆ, 1972ರಲ್ಲಿ ಕ್ಷೇತ್ರದ ಮತದಾರ ಕಾಂಗ್ರೆಸ್‌ಗೆ ಮಣೆ ಹಾಕಲಿಲ್ಲ, ಎನ್‌ಸಿಓ ಪಕ್ಷದ ಪಿ.ಎಸ್. ವೀರಭದ್ರಪ್ಪ ಅವರು ಗೆಲವು ಸಾಧಿಸಿದರು.
1978ರಲ್ಲಿ ಕಾಂಗ್ರೆಸ್ ಎರಡು ಭಾಗವಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಟಿ. ಸೋಮಪ್ಪ ಅವರು ಗೆಲುವು ಸಾಧಿಸಿದರು. 1983ರಲ್ಲಿ ಜೆಎನ್‌ಪಿಯ ಕೆ. ಬಸವನಗೌಡ ಅವರು ಗೆಲವು ಸಾಧಿಸಿದರು. ಕಾಂಗ್ರೆಸ್ ಎನ್.ಟಿ. ಬೊಮ್ಮಣ್ಣ ಅವರನ್ನು ಕೇವಲ 402 ಮತಗಳ ಅಂತರದಿಂದ ಸೋಲಿಸಿದರು.
ಎರಡು ಬಾರಿ ಬೊಮ್ಮಣ್ಣಗೆ ಜೈ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಮೀಸಲಾತಿ ಬರುವ ಪೂರ್ವದಲ್ಲಿಯೇ ಕ್ಷೇತ್ರದ ಮತದಾರ ಪರಿಶಿಷ್ಟ ಪಂಗಡಕ್ಕೆ ಸೇರಿದ ಎನ್.ಟಿ. ಬೊಮ್ಮಣ್ಣನವರನ್ನು ಎರಡು ಬಾರಿ ಕೈ ಹಿಡಿದಿದ್ದಾನೆ. 1985 ಹಾಗೂ 1989ರ ಚುನಾವಣೆಯಲ್ಲಿ ಎರಡು ಬಾರಿ ಬೊಮ್ಮಣ್ಣ ಗೆಲುವು ಸಾಧಿಸಿದ್ದಾರೆ.
ಆದರೆ, 1994ರಲ್ಲಿ ಜನತಾದಳದ ಎನ್.ಎಂ. ನಬಿ ವಿರುದ್ಧವಾಗಿ 11,717 ಮತಗಳ ಅಂತರದಿಂದ ಬೊಮ್ಮಣ್ಣ ಸೋಲುಂಡರು. ಜನತಾದಳ ನಬಿ ಗೆಲುವಿನ ನಗೆ ಬೀರಿದರು. ಕ್ಷೇತ್ರದ ಮತದಾರ ಕಾಂಗ್ರೆಸ್‌ಗೆ ಕೈ ಕೊಟ್ಟ. ಆದರೆ 1999ರಲ್ಲಿ ಕಾಂಗ್ರೆಸ್‌ನ ಸಿರಾಜ್ ಶೇಕ್ ಗೆಲುವು ಸಾಧಿಸಿದರು. ಈ ಮೂಲಕ ಕ್ಷೇತ್ರದ ಮತದಾರ ಮತ್ತೆ ಕಾಂಗ್ರೆಸ್ ಕೈ ಹಿಡಿದ.
ಬಿಜೆಪಿ ಪಾಲಾದ ಕ್ಷೇತ್ರ: 2004ರಲ್ಲಿ ಕೂಡ್ಲಿಗಿ ಕ್ಷೇತ್ರದ ಮೂಲಕ ಅನಿಲ್ ಲಾಡ್ ರಾಜಕೀಯದಲ್ಲಿ ಎಂಟ್ರಿ ಕೊಟ್ಟರು. 2004ರಲ್ಲಿ ಅನಿಲ್ ಲಾಡ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಕ್ಷೇತ್ರದಲ್ಲಿ ಕಮಲ ಅರಳಲು ಕಾರಣಕರ್ತರಾದರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿಯ ಹಿನ್ನೆಲೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದರೂ, ಬಿಜೆಪಿಯನ್ನು ಕೈ ಬಿಡಲಿಲ್ಲ. ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯ ಜಿಲ್ಲೆಯಲ್ಲಿ ಹೆಚ್ಚಾಗಿದ್ದರಿಂದ ಬಿ. ನಾಗೇಂದ್ರ ಅವರನ್ನು ಕೂಡ್ಲಿಗಿಯಲ್ಲಿ ಕಣಿಕ್ಕಿಳಿಸಿದರು. ನಾಗೇಂದ್ರ ಅವರು ಗೆಲವು ಸಾಧಿಸಿದರು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಉತ್ತಮ ಸಾಧನೆ ತೋರಿಲ್ಲ.
ಹಾಲಿ ಶಾಸಕರ ಪ್ರಭಾವ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯಲ್ಲಿ 20 ಸ್ಥಾನಗಳ ಪೈಕಿ ಕೇವಲ 5 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ ಹಾಲಿ ಶಾಸಕ ಬಿ. ನಾಗೇಂದ್ರ ಅವರು ಬಿಜೆಪಿಯಿಂದ ದೂರ ಸರಿದಿದ್ದು, ಬಿಎಸ್‌ಆರ್‌ಗೆ ಹೋಗದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತನ್ನದೇ ಆದ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ 10 ಅಭ್ಯರ್ಥಿಗಳು ಗೆಲವು ಸಾಧಿಸಿ, ತನ್ನ ವೈಯಕ್ತಿಕ ವರ್ಚಸ್ಸನ್ನು ತೋರಿಸಿಕೊಟ್ಟಿದ್ದಾರೆ. ಇದೀಗ ಕ್ಷೇತ್ರದಲ್ಲಿ ನಾಗೇಂದ್ರ ಅವರು ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳದೆ, ಪಕ್ಷೇತರವಾಗಿ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.
ಬಿಎಸ್‌ಆರ್‌ನೊಂದಿಗೆ ಗುರುತಿಸಿಕೊಂಡಿದ್ದ ನಾಗೇಂದ್ರ ದೂರ ಸರಿದಿದ್ದು, ಹಾಲಿ ಶಾಸಕ ನಾಗೇಂದ್ರ ವಿರುದ್ಧ ಬಿಎಸ್‌ಆರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಆದ್ದರಿಂದ ಈ ಬಾರಿ ಈ ಕ್ಷೇತ್ರ ಕುತೂಹಲದ ಕಣವಾಗಿದೆ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement