ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಿ: ಸೂಚನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 31
ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯು ಮುಕ್ತ ಮತ್ತು ಶಾಂತಿಯುತವಾಗಿ ನಡೆಯಲು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲು ನಿಯೋಜಿತ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟು ನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಎಂಸಿಸಿ ತಂಡದ ಮುಖ್ಯಸ್ಥ ಎಂ. ಮಂಜುನಾಥ್ ನಾಯಕ್ ತಿಳಿಸಿದ್ದಾರೆ.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಗ್ರಾಪಂ ಮಟ್ಟದಿಂದ, ಹೋಬಳಿ, ತಾಲೂಕು, ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದವರೆಗೆ ವಿವಿಧ ಹಂತದ ತಂಡಗಳನ್ನು ರಚಿಸಿದ್ದು, ಈ ತಂಡದವರೆಲ್ಲರೂ ತಮ್ಮ ಕ್ಷೇತ್ರ ವ್ಯಾಪ್ತಿ ತುರ್ತು ನಿಗಾ ವಹಿಸಬೇಕು. ಪ್ರತಿದಿನ ರಾತ್ರಿ 10 ಗಂಟೆಯೊಳಗೆ ದಿನದ ಪೂರ್ಣ ಪ್ರಮಾಣದ ವರದಿಯನ್ನು ಜಿಲ್ಲಾ ಸಮಿತಿಗೆ ಕಳುಹಿಸಬೇಕು. ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಿದೆ ಎಂದರು.
ಉಲ್ಲಂಘನೆಗೆ ಅವಕಾಶ ಬೇಡ: ಹಣ, ವಸ್ತು, ಮದ್ಯ, ವಸ್ತ್ರ, ಪರಿಕರಗಳ ವಿತರಣೆ, ಆಮಿಷ ಒಡ್ಡುವುದು, ದುಷ್ಕೃತ್ಯ ಎಸಗುವುದು, ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು, ಪರವಾನಗಿ ಪಡೆಯದೆ ಧ್ವನಿವರ್ಧಕ, ಬ್ಯಾನರ್ ಅಳವಡಿಕೆ, ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಸಭೆ ನಡೆಸುವುದು ಸೇರಿದಂತೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಗ್ರಾಮ ಪಂಚಾಯತಿಗಳಿಗೆ ನೀಡಿರುವ ಕ್ಯಾಮೆರಾಗಳ ಸಹಾಯದಿಂದ ಚಿತ್ರೀಕರಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಕೆ. ಬಾಬಾ ಮಾತನಾಡಿ, ಚುನಾವಣೆ ಕೆಲಸವನ್ನು ನಿರ್ಭೀತಿಯಿಂದ ಸಿಬ್ಬಂದಿ, ಅಧಿಕಾರಿಗಳು ನಿರ್ವಹಿಸಬೇಕು. ಅವರಿಗೆ ಬೇಕಾಗುವ ಸೂಕ್ತ ರಕ್ಷಣೆಯನ್ನು ಇಲಾಖೆ ಒದಗಿಸಲಿದೆ. ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಮತಗಟ್ಟೆ ಸುತ್ತಮುತ್ತಲೂ ಅಡಚಣೆ ಉಂಟು ಮಾಡಿದರೆ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು, ನಿಯೋಜಿತ ಸಿಬ್ಬಂದಿ ಯಾವುದೇ ಪ್ರಕರಣಗಳಿದ್ದರೂ ಗಮನಕ್ಕೆ ತರಬೇಕು ಎಂದು ಹೇಳಿದರು.
ಕ್ರಮ ಜರುಗಿಸಿ: ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಗುರುಪ್ರಸಾದ ಮಾತನಾಡಿ, ರು. 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸೆಳೆಯುವ ಗ್ರಾಹಕರ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಚುನಾವಣಾ ತಹಸೀಲ್ದಾರ್ ಕೊಟ್ರೇಶ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಪ್ರವಾಸೋದ್ಯಮ ಗೈಡ್ಗಳು, ರಾಷ್ಟ್ರೀಯ ಬಾಲಕಾರ್ಮಿಕ ಸಂಘದ ಪದಾಧಿಕಾರಿಗಳು ಗೌಪ್ಯ ಮಾಹಿತಿಯನ್ನು ನೀಡಬೇಕು. ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದ ಯಾವುದೇ ಸಭೆ-ಸಮಾರಂಭಗಳ ಬಗ್ಗೆ ಸಾರ್ವಜನಿಕ ಶಾಂತಿ ಭಂಗ ಪ್ರಕರಣಗಳಲ್ಲಿರುವವರ ಚಲನ-ವಲನಗಳ ಬಗ್ಗೆ ಗೌಪ್ಯ ವರದಿ ನೀಡಬೇಕು. ಈ ವರದಿಯನ್ನು ಗೌಪ್ಯವಾಗಿಟ್ಟುಕೊಳ್ಳಲಾಗುವುದು ಎಂದರು.
ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ, ಮತದಾನ ಜಾಗೃತಿ ಕುರಿತು ಸಿದ್ಧಪಡಿಸಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಾಗಾರದಲ್ಲಿ ಚುನಾವಣಾಧಿಕಾರಿಗಳು, ತಹಸೀಲ್ದಾರರು, ತಾಪಂ ಇಓಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಿಡಿಓಗಳು ಸೇರಿದಂತೆ ಸುಮಾರು 500 ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.