ಫುಡ್ ಮೇಳದಲ್ಲಿ ಖಾದ್ಯಗಳ ಕಲರವ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 31
ಇದುವರೆಗೆ ಕೇವಲ ಮಂಡಕ್ಕಿ, ಮಿರ್ಚಿ, ಒಗ್ಗರಣೆ, ವಡೆ ತಿನ್ನುತ್ತಲೇ ದಿನನಿತ್ಯ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದ ಕೊಟ್ಟೂರಿಗರಲ್ಲಿ ಈಗ ಹೊಸತನದ ಗಾಳಿ ಬೀಸಲಾರಂಭಿಸಿದೆ. ಇಲ್ಲಿನ ಜನರನ್ನು ಪಟ್ಟಣದ ಕ್ರಿಯೆಟಿವ್ ಲೇಡಿಸ್ ಅಸೋಷಿಯೇಷನ್ ಬಳಗ ನಗರ ಸಂಸ್ಕೃತಿಯ ಫುಡ್ ಮೇಳದತ್ತ ತಂದಿರಿಸಿತು.
ಲೇಡಿಸ್ ಕ್ಲಬ್ನ ಸದಸ್ಯತ್ವ ಪಡೆದ ಮಹಿಳೆಯರು ತಯಾರಿಸಿದ ವಿವಿಧ ರೀತಿಯ ರುಚಿಕರವಾದ ಭಕ್ಷ್ಯಗಳೇ ಫುಡ್ಮೇಳದ ಆಕರ್ಷಣೆ. ಇಲ್ಲಿನ ಸೋಮಲಿಂಗೇಶ್ವರ ದೇವಸ್ಥಾನ ಹಿಂಭಾಗದಲ್ಲಿನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಫುಡ್ ಮೇಳದಲ್ಲಿ ಉತ್ತರ-ದಕ್ಷಿಣ ಭಾರತದ ತಿನಿಸುಗಳೇ ಆಪ್ಯಾಯವಾಗಿದ್ದವು. ಅಪ್ಪಟ ವ್ಯಾಪಾರಿ ಹೋಟೆಲ್ನವರು ತಯಾರಿಸುವ ತಿನಿಸುಗಳು ರುಚಿಯ ತದ್ರೂಪಿಗಳಾಗಿದ್ದವು. ಈ ಕ್ಲಬ್ ಮಹಿಳೆಯರೇ ಖುದ್ದು ಇವುಗಳನ್ನು ತಯಾರಿಸಿದ್ದು ಮತ್ತೊಂದು ವಿಶೇಷ.
ರುಚಿಕರ ತಿನಿಸುಗಳು: ಪಾನಿಪೂರಿ, ಮಸಾಲ ಪೂರಿ, ಪಾವ್ಭಾಜಿ, ಗೋಬಿ ಮಂಚೂರಿ, ಸೂಪ್, ಕಟ್ಲೆಟ್, ವಗ್ಗರಣೆ, ಆಪರೇಷನ್ ಮಿರ್ಚಿ, ದಪ್ಪದಾಣಿ, ಮಸಾಲ ಪಾಪಡ್, ಗಿರ್ಮಿಟ್ಟ, ದಾವಣೆಗೆರೆ ಬೆಣ್ಣೆದೋಸೆ, ಅವಲಕ್ಕಿ ಮಸಾಲ, ಪರೋಟ ದಾಲ್, ಬಟಾಟೆ ಚೂಡ, ಸ್ನೋಬಾಲ್, ಗೀ ರೈಸ್ ಇತ್ಯಾದಿ ಭಕ್ಷ್ಯಗಳ ವಾಸನೆಗೆ ಮನಸೋತ ನಾಗರಿಕರು ಸ್ವಾದ ಸವಿಯಲು ಮೇಳದಲ್ಲಿ ಮುಗಿಬಿದ್ದರು.
ಕೆಲವೇ ಗಂಟೆಗಳಲ್ಲಿ ಈ ಮಹಿಳೆಯರು ಮಾಡಿದ ತಿನಿಸುಗಳು ಖಾಲಿ ಖಾಲಿ. ಅಲ್ಲಿದ್ದ ತಿನಿಸುಗಳ ಬೆಲೆ ಕೇವಲ ರು. 15. ಹೀಗಾಗಿ ಎಲ್ಲ ರೀತಿಯ ತಿನಿಸುಗಳು ಬೇಗನೆ ಖಾಲಿಯಾದವು. ತಿಂಡಿಗಳನ್ನು ತಯಾರಿಸಿದ ಮಹಿಳೆಯರಿಗೂ ರುಚಿ ನೋಡಲೂ ಸಿಗಲಿಲ್ಲ.
ಗಣ್ಯರ ಮೆಚ್ಚುಗೆ: ಈ ಫುಡ್ ಮೇಳಕ್ಕೆ ಶಾಸಕ ಕೆ. ನೇಮಿರಾಜ್ ನಾಯ್ಕ್ ಭೇಟಿ ನೀಡಿ ಕೆಲ ತಿಂಡಿಗಳ ರುಚಿಗಳನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸದಸ್ಯೆಯರ ಕಾರ್ಯಚಟುವಟಿಕೆಯನ್ನು ಗಮನಿಸಿ ಕಳೆದ ವರ್ಷ ತಾವು ರು. 1 ಲಕ್ಷ ಕಾಣಿಕೆ ನೀಡಿದ್ದನ್ನು ಸ್ವರಿಸಿಕೊಂಡರು. ಜನಪರ ಚಟುವಟಿಕೆಯಲ್ಲಿ ಸದಾ ತೊಡಗಿಸಿಕೊಂಡಿರುವ ಮಹಿಳೆಯರ ಚಟುವಟಿಕೆ ನಿಜಕ್ಕೂ ಮಾದರಿ. ಇದೇ ತರಹದ ಕಾರ್ಯಗಳನ್ನು ಈ ಮಹಿಳೆಯರು ಯಾವಾಗಲೂ ಮಾಡಲಿ ಎಂದು ಆಶಿಸಿದರು. ಜಿಪಂ ಸದಸ್ಯೆ ಶಾರದ ಪ್ರಸಾದ್, ಪಪಂ ಸದಸ್ಯೆ ಪಂಕಜಾ ತಿಪ್ಪೇಸ್ವಾಮಿ, ಹಾಲಮ್ಮ ಶಿವಕುಮಾರಗೌಡ, ಸುಮಾ ಮಂಜುನಾಥಗೌಡ ಸೇರಿದಂತೆ ಹಲವು ಮಹಿಳಾ ಜನಪ್ರತಿನಿಧಿಗಳು ಭೇಟಿ ನೀಡಿದ್ದರು. ಇದಲ್ಲದೇ ಪಟ್ಟಣದ ಜನತೆ ಫುಡ್ ಮೇಳಕ್ಕೆ ಆಗಮಿಸಿ ತಿನಿಸುಗಳ ಖರೀದಿಯಲ್ಲಿ ತೊಡಗಿದ್ದರು.
-ಜಿ. ಸೋಮಶೇಖರ