ಬಿಎಸ್ಸಾರ್ ಮೈತ್ರಿ: ಜೆಡಿಎಸ್ ಆಕಾಂಕ್ಷಿಗಳ ಆತಂಕ
ಹಗರಿಬೊಮ್ಮನಹಳ್ಳಿ: ಜೆಡಿಎಸ್ ಜತೆಗೆ ಚುನಾವಣಾ ಮೈತ್ರಿಗೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಮುಂದಾಗಿರುವ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಇತ್ತ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ನೀರವ ಮೌನ ಆವರಿಸಿದೆ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಯಾದಿಯಲ್ಲಿರುವವರು ತಮ್ಮ ಬೆಂಬಲಿಗರೊಂದಿಗೆ ಪ್ರತಿದಿನವೂ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿನೀಡಿ ನಮಗೆ ಟಿಕೆಟ್ ಸಿಗುವ ಭರವಸೆ ಇದ್ದು, ನಾವು ಅಭ್ಯರ್ಥಿಯಾದರೆ ನಮ್ಮ ಪರವಾಗಿ ನೀವು ಬೆಂಬಲಕ್ಕೆ ನಿಲ್ಲಬೇಕೆಂದು ಮತದಾರರಲ್ಲಿ ಹಾಗೂ ಗ್ರಾಮದ ಮುಖಂಡರು, ಹಿರಿಯರು, ಕಿರಿಯರಲ್ಲಿ ಮನವಿ ಮಾಡುತ್ತಿರುವ ದೃಶ್ಯಗಳು ಕಾಣುತ್ತಿದ್ದವು. ಆದರೆ ಈಗ ಎಲ್ಲವೂ ಮೌನ.
ಆಕಾಂಕ್ಷಿಗಳಲ್ಲಿ ಆತಂಕ: ಶನಿವಾರ ಬೆಂಗಳೂರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಎಸ್ಸಾರ್ ಕಾಂಂಗ್ರೆಸ್ ನಡುವಿನ ಮೈತ್ರಿ ಮಾತುಕತೆಗಳು ನಡೆದ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಇತ್ತ ಭಾನುವಾರ ಕ್ಷೇತ್ರದಲ್ಲಿ ಜೆಡಿಎಸ್ ಚುನಾವಣ ಚಟುವಟಿಕೆ ಸ್ಥಗಿತಗೊಂಡಿದ್ದಲ್ಲದೆ, ಆಕಾಂಕ್ಷಿಗಳು ಗ್ರಾಮಗಳನ್ನು ಸುತ್ತುವುದಕ್ಕೆ ತಾತ್ಕಾಲಿಕ ವಿರಾಮ ಘೋಷಿಸಿದ್ದಾರೆ. ಜೆಡಿಎಸ್ ಹಾಗೂ ಬಿಎಸ್ಸಾರ್ ಮಧ್ಯೆ ಮೈತ್ರಿ ಏರ್ಪಟ್ಟರೆ ರಾಜ್ಯದ ಇತರೆ ಜಿಲ್ಲೆಗಳ ವಿಚಾರ ಏನೆ ಆಗಿರಲಿ, ಬಳ್ಳಾರಿ ಜಿಲ್ಲೆ ವಿಚಾರದಲ್ಲಿ ಬಿಎಸ್ಸಾರ್ ಮೈತ್ರಿಯಲ್ಲಿ ಮೆಲುಗೈ ಸಾಧಿಸುವ ಲಕ್ಷಣಗಳೇ ಹೆಚ್ಚಾಗಿವೆ.
ಅಂದರೆ ಜಿಲ್ಲೆಯಲ್ಲಿರುವ 9 ವಿಧಾನಸಭಾ ಕ್ಷೇತ್ರಗಳು ಹೆಚ್ಚುಕಡಿಮೆ ಬಿಎಸ್ಸಾರ್ ಪಾಳೆಯಕ್ಕೆ ಸಿಗುವ ಅವಕಾಶಗಳೇ ಹೆಚ್ಚು. ಇದು ಜೆಡಿಎಸ್ ಆಕಾಂಕ್ಷಿಗಳನ್ನು ಆತಂಕಕ್ಕೀಡು ಮಾಡಿದೆ.
ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶ್ರೀರಾಮುಲು ಅವರಿಗೆ ಜೆಡಿಎಸ್ ಬೆಂಬಲ ನೀಡಿತ್ತು. ಹೀಗಾಗಿ ಬಳ್ಳಾರಿ ಜಿಲ್ಲೆ ಮಟ್ಟಿಗೆ ಈ ಸಲವೂ ಇದೆ. ಪುನರಾವರ್ತನೆಯಾದರೆ ಹೇಗೆಂಬ ಆತಂಕ ಆಕಾಂಕ್ಷಿಗಳ ಮನದಲ್ಲಿ ಮೂಡಿದೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ. ಮಲ್ಲಿಕಾರ್ಜುನ, ಮೈತ್ರಿ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ. ನಮ್ಮ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಆದರೆ ಮೈತ್ರಿ ಏರ್ಪಟ್ಟಲ್ಲಿ ಬಳ್ಳಾರಿ ನಗರ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ಗೆ ಸಿಗಲಿವೆ. ಈ ಕುರಿತು ಜಿಲ್ಲಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದರು.