ಸುಕೋ ಬ್ಯಾಂಕ್ ರು. 315 ಕೋಟಿ ವ್ಯವಹಾರ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಮಾಹಿತಿ
ಬಳ್ಳಾರಿ: ಉತ್ತಮ ಆಡಳಿತದಿಂದಾಗಿ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಒಂದು ವರ್ಷದ ಅವಧಿಯಲ್ಲಿ ರು. 315.54 ಕೋಟಿ ವ್ಯವಹಾರ ನಡೆಸಿದೆ. ಸಾಲ ವಸೂತಿಲಾತಿಯಲ್ಲಿ ಎನ್‌ಪಿಎ ಶೇ. 0.40ರಷ್ಟು ಇಳಿದಿರುವುದು ಬ್ಯಾಂಕ್‌ನ ಉತ್ತಮ ಸಾಧನೆಯಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದ್ದಾರೆ.
ನಗರದ ಬ್ಯಾಂಕಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 40ರಷ್ಟು ಸಾಧನೆಯಾಗಿದೆ. ವರ್ಷದ ಅವಧಿಯಲ್ಲಿ ರು. 193.86 ಕೋಟಿ ಠೇವಣಿ ಸಂಗ್ರಹಿಸಿ, ರು. 121.68 ಕೋಟಿ ಸಾಲ ನೀಡುವ ಮೂಲಕ ಉತ್ತಮ ಸಾಧನೆ ತೋರಿದೆ. ರು. 300 ಕೋಟಿ ವ್ಯವಹಾರ ಗುರಿ ಹೊಂದಲಾಗಿತ್ತು, ಗುರಿಗಿಂತ ಹೆಚ್ಚಿನ ಸಾಧನೆಯನ್ನು ಬ್ಯಾಂಕ್ ಮಾಡಿದೆ. ಎನ್‌ಪಿಎಯಿಂದ ಶೇ. 0.40ರಷ್ಟು ಇಳಿಕೆಯಾಗಿರುವುದು ಸಾಧನೆಯಾಗಿದೆ. ಈ ವರ್ಷದಲ್ಲಿ ರು. 3.20 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ ಎಂದರು.
9 ಶಾಖೆ: ಕಳೆದ ವರ್ಷ ಬ್ಯಾಂಕ್ ರು. 234 ಕೋಟಿ ವ್ಯವಹಾರ ಹೊಂದಿತ್ತು, ಈ ವರ್ಷ ಶೇ. 40ರಷ್ಟು ಪ್ರಗತಿ ಸಾಧಿಸಿದೆ. ಇನ್ನು 1.5ರಷ್ಟು ನಿವ್ವಳ ಲಾಭ ಹೊಂದಿತ್ತು. ಈಗಾಗಲೇ ರಾಜ್ಯದಲ್ಲಿ 9 ಶಾಖೆಗಳನ್ನು ಹೊಂದಿದೆ. ಆರ್‌ಬಿಐ ಅನುಮತಿಯೊಂದಿಗೆ ಬೆಂಗಳೂರು, ಶಿವಮೊಗ್ಗ, ಯಾದಗಿರಿ, ಲಿಂಗಸ್ಗೂರು ಹಾಗೂ ರಾಯಚೂರಿನಲ್ಲಿ 2ನೇ ಶಾಖೆಯನ್ನು ತೆರೆಯಲಾಗಿದೆ. ಬಳ್ಳಾರಿ, ಹುಬ್ಬಳ್ಳಿ, ಸಿಂಧನೂರುಗಳಲ್ಲಿ ಸ್ವಂತ ಕಟ್ಟಡವನ್ನು ಹೊಂದಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದ ಮೊದಲ ಸಹಕಾರಿ ಬ್ಯಾಂಕ್: ಸಿಂಧನೂರಿನ ಶಾಖೆಯಲ್ಲಿ ಪ್ರತಿ ವರ್ಷಕ್ಕೆ ರು. 60 ಕೋಟಿ ವಹಿವಾಟು ಇದ್ದು, ಬ್ಯಾಂಕ್‌ನಲ್ಲೇ ಇದು ಹೆಚ್ಚು ವಹಿವಾಟು ಹೊಂದಿರುವ ಶಾಖೆ. ಬಳ್ಳಾರಿ ಶಾಖೆ 2ನೇ ಸ್ಥಾನದಲ್ಲಿದೆ. 4 ವರ್ಷದ ಹಿಂದೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇಂಟರ್‌ನೆಟ್ ಬ್ಯಾಂಕ್ ವ್ಯವಸ್ಥೆ ಮಾಡಲಾಗುತ್ತದೆ. ಸುಕೋ ಬ್ಯಾಂಕ್ ರಾಷ್ಟ್ರದ ಜಾಲಕ್ಕೆ ಸೇರಿದ ರಾಜ್ಯದ ಪ್ರಥಮ ಸಹಕಾರಿ ಬ್ಯಾಂಕ್ ಆಗಿದೆ ಎಂದರು.
ಈ ಬಾರಿ ಪ್ರಥಮ ಬಾರಿಗೆ ಸುಕೋ ಬ್ಯಾಂಕ್ ವತಿಯಿಂದ ಅತ್ಯುತ್ತಮ ಕೃಷಿಕ, ಕೃಷಿ ತಂತ್ರಜ್ಞ ಹಾಗೂ ಉತ್ತಮ ಗ್ರಾಮೀಣ ಕೃಷಿ ವರದಿಗೆ ಪ್ರತಿವರ್ಷ ಮೂವರಿಗೆ ತಲಾ ರು. 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಲು ನಿಶ್ಚಯಿಸಿದ್ದು, ಈ ಕುರಿತಾಗಿ ಐದು ಜನರ ಕಮಿಟಿಯನ್ನು ರಚನೆ ಮಾಡಲಾಗಿದೆ. ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಶಸ್ತಿ ಆರಂಭಿಸಲಾಗುತ್ತಿದೆ ಎಂದರು.
ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿರುವ ಮತ್ತು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಬೆಳವಣಿಗೆ ಪೂರಕವಾಗಿ ಶ್ರಮಿಸುತ್ತಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಕೃಷಿಗೆ ಸಂಬಂಧಿಸಿದಂತೆ ಉತ್ತಮ ಗ್ರಾಮೀಣ ವರದಿ ಮಾಡುವ ಪತ್ರಕರ್ತರನ್ನು ಗುರುತಿಸಿ, ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಏ. 10ರಂದು ಸಭೆ ಕರೆದಿದ್ದು, ಹಿರಿಯ ಪತ್ರಕರ್ತರ ಸಲಹೆ ಪಡೆದು, ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ಸಿಇಓ ವೆಂಕಟೇಶ್ ಇದ್ದರು.