ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ
ಕನ್ನಡಪ್ರಭ ವಾರ್ತೆ ಸಂಡೂರು ಮೇ 1
ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿ, ಮಕ್ಕಳಿಬ್ಬರನ್ನು ನೀರಲ್ಲಿ ಮುಳುಗಿಸಿ ಕೊಂದು ತಾನೂ ನೇಣಿಗೆ ಶರಣಾದ ದಾರುಣ ಘಟನೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಗ್ರಾಮದ ರಾಘವೇಂದ್ರ (28) ತನ್ನ ಪತ್ನಿ ಸೌಭಾಗ್ಯ (24), ಮಕ್ಕಳಾದ ನವೀನ್ (4.5) ಹಾಗೂ ಮೇಘನಾ (2) ಎಂಬುವರನ್ನು ಹತ್ಯೆ ಮಾಡಿ, ತಾನೂ ನೇಣು ಹಾಕಿಕೊಂಡಿದ್ದಾನೆ.
ರಾಘವೇಂದ್ರ ಹಾಗೂ ಸೌಭಾಗ್ಯಾ ನಡುವೆ ಯಾವುದೋ ಕಾರಣಕ್ಕೆ ವೈಮನಸ್ಸು ಉಂಟಾಗಿ, ಹಲವು ಬಾರಿ ಜಗಳಕ್ಕೂ ಕಾರಣವಾಗಿತ್ತು. ಕುಟುಂಬದ ಹಿರಿಯರು ಇಬ್ಬರ ನಡುವೆ ಸಂಧಾನ ಮಾಡುವ ಸಂಬಂಧವನ್ನು ಸುಧಾರಿಸಿದ್ದರು. ಆದರೆ ಮಂಗಳವಾರ ರಾಘವೇಂದ್ರ ತನ್ನ ಪತ್ನಿಗೆ ವಿಷ ಕುಡಿಸಿ, ಬಳಿಕ ಕೊಡಲಿಯಿಂದ ಕೊಚ್ಚಿ ಹಾಕಿ, ಆಕೆಯ ರುಂಡ-ಮುಂಡಗಳನ್ನು ಬೇರ್ಪಡಿಸಿದ್ದಾನೆ. ಆಮೇಲೆ ತನ್ನ ನಾಲ್ಕೂವರೆ ವರ್ಷದ ಮಗ ನವೀನ್ನನ್ನು ನೀರಿನ ಹಂಡೆಯಲ್ಲಿ ಹಾಗೂ ಎರಡು ವರ್ಷದ ಮಗಳು ಮೇಘನಾಳನ್ನು ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆಮೇಲೆ ತಾನು ನೇಣು ಹಾಕಿಕೊಂಡಿದ್ದಾನೆ. ರಾತ್ರಿಯಾದರೂ ಮನೆಯಿಂದ ಯಾರೂ ಹೊರಗೆ ಬಾರದ ಕಾರಣ ಸಂದೇಹಗೊಂಡ ಪಕ್ಕದ ಮನೆಯಲ್ಲೇ ಇರುವ ಸಂಬಂಧಿಕರು ಮನೆಗೆ ಹೋಗಿ ನೋಡಿದಾಗ ಈ ಹೃದಯ ವಿದ್ರಾವಕ ಸನ್ನಿವೇಶ ಬೆಳಕಿಗೆ ಬಂದಿದೆ.
ಎಸ್ಪಿ ಡಾ. ಚಂದ್ರಗುಪ್ತಾ, ಡಿವೈಎಸ್ಪಿ ಪಿ.ಡಿ. ಗಜಕೋಶ್, ಸಿಪಿಐ ಅಶೋಕ್, ಗಾದಿಗನೂರು ಠಾಣೆ ಸಿಪಿಐ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾದಿಗನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.