ಮತದಾನಕ್ಕೆ ವೋಟರ್ ಎಕ್ಸ್ಪ್ರೆಸ್!
ಚುನಾವಣಾ ಆಯೋಗ ಶೇ. 100ರಷ್ಟು ಮತದಾನ ಮಾಡಲು 'ಸ್ವೀಪ್' ಯೋಜನೆ ಜಾರಿಗೆ ತಂದರೆ, ಅದರ ಮುಂದುವರಿದ ಭಾಗವಾಗಿ ಬಳ್ಳಾರಿ ಜಿಲ್ಲಾಡಳಿತ, ಮತದಾರರನ್ನು ಮತಗಟ್ಟೆ ಬಾಗಿಲಿಗೆ ಕರೆದೊಯ್ಯಲು ನೂತನ 'ವೋಟರ್ ಎಕ್ಸ್ಪ್ರೆಸ್' ಬಸ್ ವ್ಯವಸ್ಥೆಯನ್ನು ಮೇ 4ರಿಂದ ಜಾರಿ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಬಳ್ಳಾರಿ ಮೇ 3-
ಚುನಾವಣಾ ಆಯೋಗ ಶೇ. 100ರಷ್ಟು ಮತದಾನ ಮಾಡಲು 'ಸ್ವೀಪ್' ಯೋಜನೆ ಜಾರಿಗೆ ತಂದರೆ, ಅದರ ಮುಂದುವರಿದ ಭಾಗವಾಗಿ ಬಳ್ಳಾರಿ ಜಿಲ್ಲಾಡಳಿತ, ಮತದಾರರನ್ನು ಮತಗಟ್ಟೆ ಬಾಗಿಲಿಗೆ ಕರೆದೊಯ್ಯಲು ನೂತನ 'ವೋಟರ್ ಎಕ್ಸ್ಪ್ರೆಸ್' ಬಸ್ ವ್ಯವಸ್ಥೆಯನ್ನು ಮೇ 4ರಿಂದ ಜಾರಿ ಮಾಡುತ್ತಿದೆ.
ದೂರದ ಪ್ರದೇಶದಲ್ಲಿರುವ ಜನರನ್ನು ಮತಗಟ್ಟೆಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆ ಇದಾಗಿದೆ. ಆ ಮೂಲಕ ಮತದಾನ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ. ಇದೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲಾಡಳಿತ ಹಾಗೂ ಕೆಎಸ್ಆರ್ಟಿಸಿ ಜಂಟಿಯಾಗಿ ಈ ವ್ಯವಸ್ಥೆ ಮಾಡಿವೆ.
ಇಂದಿನಿಂದಲೇ: ಜಿಲ್ಲಾಡಳಿತ ಕೆಎಸ್ಆರ್ಟಿಸಿಯೊಂದಿಗೆ ಮಾತುಕತೆ ನಡೆಸಿದ್ದು, ಈ ವ್ಯವಸ್ಥೆಯನ್ನು ಮೇ 4ರಿಂದಲೇ ಜಾರಿಗೆ ತರುತ್ತಿದೆ. ಮೇ 5ರ ಬೆಳಗ್ಗೆಯಿಂದ ಮತದಾನ ಪೂರ್ಣಗೊಳ್ಳುವ ದಿನದ ಸಂಜೆ 5 ಗಂಟೆವರೆಗೆ ವೋಟರ್ ಎಕ್ಸ್ಪ್ರೆಸ್ ಸಂಚರಿಸಲಿವೆ. ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಲ್ಲಿ 10 ಬಸ್ ಹಾಗೂ ಹೊಸಪೇಟೆಯಲ್ಲಿ 5 ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರತ್ಯೇಕ ರೂಟ್ ಮ್ಯಾಪ್: ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಕೇಂದ್ರವಾಗಿರಿಸಿಕೊಂಡು ವೋಟರ್ ಎಕ್ಸ್ಪ್ರೆಸ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಯಾವ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ ಎಂದು ಜಿಲ್ಲಾಡಳಿತ ಗುರುತಿಸಿಕೊಂಡಿದ್ದು, ಅದರಲ್ಲೂ ಕ್ಲಸ್ಟರ್ (ಒಂದೇ ಸ್ಥಳದಲ್ಲಿ 2-3 ಮತಗಟ್ಟೆಗಳಿರುವುದು) ಮತಗಟ್ಟೆಗಳಲ್ಲಿ ಇಂತಹ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ಹೆಸರುಗಳನ್ನು ಆಧರಿಸಿ ಮಾರ್ಗ ನಕಾಶೆಯನ್ನು ಕೆಎಸ್ಆರ್ಟಿಸಿ ಮತ್ತು ಜಿಲ್ಲಾಡಳಿತ ತಯಾರಿಸಿವೆ. ಈ ಮಾರ್ಗವಾಗಿಯೇ ಬಸ್ಗಳು ಸಂಚರಿಸಲಿವೆ.
ಅತ್ಯಂತ ಕಡಿಮೆ ದರ: ಅತ್ಯಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬಸ್ಗಳು ಸಂಚರಿಸುತ್ತವೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳ ಮೂಲಕ ಕರೆದುಕೊಂಡು ಹೋದರೆ, ಮತದಾರರಿಗೆ ಆಮಿಷವೊಡ್ಡಿದಂತಾಗುತ್ತದೆ. ಇದು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗುವುದರಿಂದ ಜಿಲ್ಲಾಡಳಿತವೇ ಈ ವ್ಯವಸ್ಥೆಗೆ ಮುಂದಾಗಿದೆ. ಪ್ರತಿ ನಗರ ಸಾರಿಗೆ ಬಸ್ಗಳ ದರ ಕನಿಷ್ಠ ರು. 5ರಿಂದ 10ಗಳಿರುವುದರಿಂದ ಬಸ್ಗಳಿಗೆ ಚಾರ್ಜ್ ನೀಡಿ ಮತದಾನ ಮಾಡುವುದು ಕಷ್ಟ. ಆದರೆ, ವೋಟರ್ ಎಕ್ಸ್ಪ್ರೆಸ್ ದರಗಳು ಕನಿಷ್ಠ ರು. 3, ಗರಿಷ್ಠ ರು. 5 ಅತ್ಯಂತ ಕಡಿಮೆ ದರ ನಿಗದಿಪಡಿಸಲಾಗಿದೆ.
ಮತದಾರನ ಮನೆ ಬಾಗಿಲಿಗೆ ಬಸ್: ಕಳೆದ ಬಾರಿ ಬಳ್ಳಾರಿ ನಗರದಲ್ಲಿ ಕೇವಲ ಶೇ. 51.36ರಷ್ಟು ಮತದಾನವಾಗಿತ್ತು. ಮತಗಟ್ಟೆಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಒಂದು ನಿಗದಿತ ಪ್ರದೇಶದಲ್ಲಿ ಬಸ್ ನಿಲ್ಲಿಸಲಾಗಿರುತ್ತದೆ.
ಆ ಬಸ್ಗೆ ಮತಗಟ್ಟೆಗಳ ಸಂಖ್ಯೆಯನ್ನು ಬರೆಯಲಾಗಿದ್ದು, ಯಾವ, ಯಾವ ಮತಗಟ್ಟೆಗಳಿಗೆ ಈ ಬಸ್ ಹೋಗುತ್ತದೆ ಎಂಬುದು ಗೊತ್ತಾಗುತ್ತದೆ. ಮತದಾರ ತಾನು ಮತದಾನ ಮಾಡುವ ಮತಗಟ್ಟೆ ಸಂಖ್ಯೆ ನೋಡಿಕೊಂಡು ಹೋದರೆ, ಬಸ್ ಮತದಾರರನ್ನು ಮತದಾನ ಕೇಂದ್ರಕ್ಕೆ ಬಿಟ್ಟು ಬರುತ್ತದೆ. ಮತ್ತೆ ಮತದಾನದ ನಂತರ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತದೆ.
ಸ್ವೀಪ್ ಯೋಜನೆಯ ಮುಂದುವರಿದ ಭಾಗ
ಅತ್ಯಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಇಂತಹ ವ್ಯವಸ್ಥೆ ಮಾಡಲಾಗಿದೆ. ಈ ಕಲ್ಪನೆಯನ್ನು ಚುನಾವಣಾ ಆಯೋಗಕ್ಕೆ ತಿಳಿಸಿದಾಗ, ಆಯೋಗವು ಮಾಡಬಹುದು ಎಂದು ಹೇಳಿದ್ದರಿಂದ ಸ್ವೀಪ್ ಯೋಜನೆಯ ಮುಂದುವರಿದ ಭಾಗವಾಗಿ, ವೋಟರ್ ಎಕ್ಸ್ಪ್ರೆಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸ್ವೀಪ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇದು ಸಹಕಾರಿಯಾಗಲಿದೆ.
- ಅಮ್ಲಾನ್ ಆದಿತ್ಯ ಬಿಸ್ವಾಸ್ ಬಳ್ಳಾರಿ ಡಿಸಿ
- ಶಶಿಧರ ಮೇಟಿ