ಕತ್ತಲ್ರಾತ್ರಿ ಹಣ, ಹೆಂಡ ಹಂಚಿದ್ದು ಖಾತ್ರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 4
ಅಕ್ರಮಗಳ ಕಡಿವಾಣಕ್ಕೆ ಚುನಾವಣಾ ಆಯೋಗವು ಅದೆಷ್ಟೋ ಕಠಿಣ ಕ್ರಮಗಳನ್ನು ಕೈಗೊಂಡರೂ ಕತ್ತಲರಾತ್ರಿ ದಿನ ಮತದಾರರ ಮನೆಗಳಿಗೆ ಹಣ ಮತ್ತು ಹೆಂಡ ಯಾವುದೆ ಅಡೆತಡೆ ಇಲ್ಲದಂತೆ ತಲುಪಿದೆ.
ಶುಕ್ರವಾರ ಮಧ್ಯರಾತ್ರಿಯಿಂದಲೆ ವಿವಿಧ ಪಕ್ಷಗಳ ಮುಖಂಡರ ಮನೆಯಲ್ಲಿ ಸಂಗ್ರಹಿಸಿಲಾಗಿದ್ದ ಹಣ ಮತ್ತು ಹೆಂಡ ಈಗಾಗಲೆ ಕ್ಷೇತ್ರದ ಪ್ರತಿ ಬೂತ್ನ ಮತದಾರರ ಸಂಖ್ಯೆಗೆ ಅನುಗುಣವಾಗಿ ಆಯಾ ಗ್ರಾಮಗಳ ಮುಖಂಡರ ಮನೆಗಳಿಗೆ ರವಾನೆಯಾಗಿತ್ತು. ಮನೆಗಳಲ್ಲಿ ಹಣ, ಹೆಂಡ ಇಟ್ಟರೆ ಚುನಾವಣಾಧಿಕಾರಿಗಳು ದಾಳಿ ಮಾಡುವ ಭಯದಲ್ಲಿದ್ದ ಮುಖಂಡರು, ಅವರಿಗೆ ಸೇರಿದ ಕಣದಲ್ಲಿನ ಮೇವಿನ ಬಣವೆ, ಹೊಟ್ಟಿನ ಬಣವೆಗಳಲ್ಲಿ ಇಟ್ಟು ರಾತ್ರೋರಾತ್ರಿ ಹಂಚಿದ್ದಾರೆ.
ಚುನಾವಣಾ ಆಯೋಗ ಸಾಕಷ್ಟು ಕಠಿಣ ಕ್ರಮ ಕೈಗೊಂಡು ಹಣ, ಹೆಂಡ ಹಂಚಲು ಬಿಟ್ಟಲ್ಲ. ಎಲ್ಲ ಕಡೆಗಳಿಂದಲೂ ಚೆಕ್ಪೋಸ್ಟ್ಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಎಲ್ಲಿಯೂ ಅಕ್ರಮ ನಡೆದಿಲ್ಲವೆಂದು ಆಯೋಗ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಈಗಾಗಲೇ ಮದ್ಯದಂಗಡಿಗಳ ಬಾಗಿಲುಗಳಿಗೆ ಸೀಲ್ ಹಾಕಿದ್ದರೂ ಮತದಾರರಿಗೆ ಕುಡಿಯಲು ಹೆಂಡ ಎಲ್ಲಿಂದ ಬಂತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಹಣ ಹಂಚಿಕೆ: ಕ್ಷೇತ್ರದಲ್ಲಿ ಈಗಾಗಲೇ ಕೋಟಿ ಕೋಟಿ ವಹಿವಾಟು ನಡೆದಿದ್ದು, ಎಲ್ಲ ಕಡೆಗಳಲ್ಲಿಯೂ ಕದ್ದು ಮುಚ್ಚಿ ವ್ಯವಹಾರ ನಡೆಯುತ್ತಿದೆ. ಎಂಸಿಸಿ ತಂಡ, ಫೋಟೋಗ್ರಾಫರ್, ಚುನಾವಣಾ ವೀಕ್ಷಕರು ಸೇರಿದಂತೆ ಇಷ್ಟೆಲ್ಲ ಚುನಾವಣಾ ಸಿಬ್ಬಂದಿ ಕಣ್ಣು ತಪ್ಪಿಸಿ ಹಾಡುಹಗಲೆ ಹಣ ಹಂಚುತ್ತಿದ್ದಾರೆ. ಅಧಿಕಾರಿಗಳ ಹಾದಿ ತಪ್ಪಿಸಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ 2-3 ಮಂದಿ ಸೇರಿ 7-8 ತಂಡಗಳಲ್ಲಿ ಹಣ, ಹೆಂಡ ಹಂಚಿ ಮತದಾರರ ಮನವೂಲಿಸುತ್ತಿದ್ದಾರೆ. ಶುಕ್ರವಾರದಿಂದಲೇ ಹೆಂಡ ಹಂಚುತ್ತಿದ್ದಾರೆ. ಇದಲ್ಲದೇ ಒಂದು ಮತಕ್ಕೆ ರು. 100-150 ನೀಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಹೆಸರು ಹೇಳಲು ಇಚ್ಛಿಸದ ಮತದಾರನೊಬ್ಬ ಒಂದು ಪಕ್ಷದ ಕಾರ್ಯಕರ್ತನೊಬ್ಬ ನಮ್ಮ ಮನೆಗೆ ಬಂದು ನಮಗೆ ಓಟು ಹಾಕಿ, ಆಶೀರ್ವಾದ ಮಾಡಿ, ಮುಂದೆ ನಿಮಗೆ ಅನುಕೂಲ ಮಾಡಿಕೊಡುತ್ತೇವೆ. ಈ ಹಣ ತೆಗೆದುಕೊಳ್ಳಿ ಅಂದ್ರು, ಆದರೆ ತಾವು ಹಣ ಬೇಡವೆಂದರೂ ಕೊಟ್ಟು ಹೋಗಿದ್ದಾರೆ ಎನ್ನುತ್ತಾರೆ.
ಕ್ಷೇತ್ರದಲ್ಲಿ ಈವರೆಗೂ ಅಕ್ರಮ ಮದ್ಯ ಸಾಗಣಿಕೆ ಮಾಡಿರುವ ಅಲ್ಲೊಂದು, ಇಲ್ಲೊಂದು ದೂರುಗಳನ್ನು ಬಿಟ್ಟರೆ ಎಲ್ಲಿಯೂ ಹಣ ಜಪ್ತಿಯಾಗಿರುವ ಪ್ರಕರಣಗಳು ನಡೆದಿಲ್ಲ. ಈ ಕುರಿತು ಚುನಾವಣಾಧಿಕಾರಿ ಕೆ. ರಾಮಪ್ಪರನ್ನು ಮಾತನಾಡಿಸಿದಾಗ, ಕ್ಷೇತ್ರದಲ್ಲಿ ಈಗಾಗಲೆ ಅಕ್ರಮ ಮದ್ಯ ಸಾಗಾಣಿಕೆ ಮಾಡಿರುವ ಕೇಸ್ಗಳನ್ನು ದಾಖಲಿಸಲಾಗಿದೆ. ಈವರೆಗೂ ಯಾವ ಕಡೆಗೂ ಹಣ ಸಿಕ್ಕಿರುವ ಪ್ರಕರಣಗಳು ಕಂಡು ಬಂದಿಲ್ಲ ಎಂದು ಹೇಳಿದರು.