ಕೂಡ್ಲಿಗಿ: ಅಭ್ಯರ್ಥಿಗಳ ಮತದಾನ ಎಲ್ಲಿ?
ಕೂಡ್ಲಿಗಿ: ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿ ಬಿ. ನಾಗೇಂದ್ರ ತಮ್ಮ ಪತ್ನಿ ಮಂಜುಳಾಶ್ರೀ ಜತೆ ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜು ಮತಕೇಂದ್ರದಲ್ಲಿ ಭಾನುವಾರ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್. ವೆಂಕಟೇಶ್ ಅವರು ತಾಲೂಕಿನ ನರಸಿಂಹಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತ ಕೇಂದ್ರದಲ್ಲಿ ಮತ ಚಲಾಯಿಸಲಿದ್ದಾರೆ.
2008ರಲ್ಲಿ ನಡೆದ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ನಾಗೇಂದ್ರ ಮತ ಚಲಾಯಿಸಿರಲಿಲ್ಲ.
ಈ ಬಾರಿ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದು, ಪಟ್ಟಣ ಪಂಚಾಯತ್ ಚುನಾವಣೆಯಲ್ಲೇ ಪತ್ನೀ ಸಮೇತರಾಗಿ ಹಕ್ಕು ಚಲಾಯಿಸಿದ್ದರು. ಮಾಜಿ ಸಚಿವರಾದ ಎನ್.ಎಂ. ನಬಿಸಾಬ್, ಭಾಗೀರಥಿ ಮರುಳಸಿದ್ಧನಗೌಡ, ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಕೂಡ್ಲಿಗಿಯಲ್ಲಿ ಮತ ಚಲಾಯಿಸುವರು.
ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಬಾಬು ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಮತದಾನ ಮಾಡುವರು.