ಕೊಟ್ಟೂರು: ಬಿಗಿ ಪೊಲೀಸ್ ಬಂದೋಬಸ್ತ್
ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 51 ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 21 ಮತಕೇಂದ್ರಗಳು ಕೊಟ್ಟೂರು ವ್ಯಾಪ್ತಿಗೆ ಬರಲಿದ್ದು, ಮೇ 5ರಂದು ಚುನಾವಣೆ ಸುಗಮವಾಗಿ ಜರುಗಲು ಅಗತ್ಯ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪಟ್ಟಣದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗುರುರಾಜ ಎನ್. ಮೈಲಾರ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮತಕೇಂದ್ರಗಳ ಪೈಕಿ 13 ಅತಿಸೂಕ್ಷ್ಮ, 9 ಸೂಕ್ಷ್ಮ ಮತಕೇಂದ್ರಗಳೆಂದು ಗುರುತಿಸಲಾಗಿದೆ. ಈ ಕೇಂದ್ರಗಳಿಗೆ ಹೆಚ್ಚುವರಿ ರಕ್ಷಣಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ಚುನಾವಣಾ ಪ್ರಕ್ರಿಯೆ ಬಂದೋಬಸ್ತ್ನ ನೇತೃತ್ವ ವಹಿಸಿದ್ದಾರೆ. ಚುನಾವಣಾ ಕಾರ್ಯಕ್ಕೆ ಇಬ್ಬರು ಪಿಎಸ್ಐ, ಮೂವರು ಎಎಸ್ಐ, ಮೂವರು ಎಚ್ಸಿ, 30 ಪಿಸಿಗಳಲ್ಲದೆ, ಒರಿಸ್ಸಾದ ರಾಜ್ಯದ ಮೀಸಲು ಪೊಲೀಸ್ ಪಡೆಯ ತುಕಡಿ, 1 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಜರುಗದಂತೆ ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.