ಬಳ್ಳಾರಿ, ಹೊಸಪೇಟೆಗೆ ನಗರ ಸಾರಿಗೆ
ಬಳ್ಳಾರಿ: ಗುಲ್ಬರ್ಗಾ ಮಾದರಿಯಲ್ಲಿ ಬಳ್ಳಾರಿ ಮತ್ತು ಹೊಸಪೇಟೆ ನಗರದ ಸಾರ್ವಜನಿಕರಿಗೆ ನಗರ ಸಂಚಾರಕ್ಕೆ ಅನುಕೂಲವಾಗುವ ನೂತನ ಸಾರಿಗೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಗರ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸಲು ಶ್ರಮಿಸಲಾಗುತ್ತಿದ್ದು, ಬಳ್ಳಾರಿ ನಗರಕ್ಕೆ ವಿಶೇಷ ಆಸಕ್ತಿವಹಿಸಿ ನಗರದ ಸಾರ್ವಜನಿಕರಿಗೆ ಒಂದು ಕೊಡುಗೆಯಾಗಿ ಭುವನ ವಿಜಯನಗರ ಸಾರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವೋಟರ್ಸ್ ಎಕ್ಸ್ಪ್ರೆಸ್ ಚುನಾವಣೆಯ ನಂತರ ಮೇ 6ರಿಂದ ನಗರ ಸಾರಿಗೆಯಾಗಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೇ ಯೋಜನೆಯನ್ನು ರೂಪಿಸಲಾಗಿದ್ದು, ನೂತನ ಬಸ್ಗಳನ್ನು ಖರೀದಿಸಿ ಉದ್ಘಾಟನೆಗಾಗಿ ಸಮಯ ನಿಗದಿಪಡಿಸಲು ಯೋಜಿಸಲಾಗುತ್ತಿತ್ತು. ಆದರೆ ಚುನಾವಣಾ ಆಯೋಗದ ಅನುಮತಿ ಪಡೆದು ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಬಳ್ಳಾರಿ ನಗರದಲ್ಲಿ 33 ನೂತನ ವಾಹನಗಳು ನಗರದ ಎಲ್ಲ ಬಡಾವಣೆಗಳು ಮತ್ತು ತೋರಣಗಲ್ಲಿನವರೆಗೂ ಈ ಬಸ್ಗಳು ಸಂಚರಿಸಲಿವೆ. ಒಟ್ಟು 17 ಮಾರ್ಗಗಳನ್ನು ರೂಪಿಸಲಾಗಿದ್ದು, 5253 ಕಿ.ಮೀ. ರಸ್ತೆಯಲ್ಲಿ ಸಂಚರಿಸಲಿವೆ. 875 ಟ್ರಿಪ್ಗಳಾಗಿ ಪ್ರತಿ 8 ನಿಮಿಷಕ್ಕೆ ಒಂದು ಬಸ್ ಈ ಮಾರ್ಗದಲ್ಲಿ ಸಂಚರಿಸುವಂತೆ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಹೊಸಪೇಟೆಗೆ 18 ಬಸ್ಗಳನ್ನು ಒದಗಿಸಲಾಗುವುದು. ಹಿಂದುಳಿದ ಪ್ರದೇಶದಲ್ಲಿ ಪ್ರಮುಖವಾಗಿ ಸಾರಿಗೆ ವ್ಯವಸ್ಥೆ ಸುಧಾರಣೆ ಮಾಡುವ ಹಿತದೃಷ್ಟಿಯಿಂದ ಈ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುವುದು. ನಗರ ಸಾರಿಗೆಗಾಗಿ ಸಾರ್ವಜನಿಕರಿಂದ ಸಾಕಷ್ಟು ದೂರು ಮತ್ತು ಮನವಿಗಳು ಬಂದಿದ್ದವು. ತಾವು ಅನೇಕ ವರ್ಷಗಳ ಅವಧಿಯಲ್ಲಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿರುವುದರಿಂದ ಬಳ್ಳಾರಿ ನಗರದ ಬಗ್ಗೆ ಹೆಮ್ಮೆ ಇದೆ. ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಸಾರಿಗೆ ಪ್ರಮುಖ ಸಾಧನವಾಗಿರುವುದರಿಂದ ಉತ್ತಮ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸಲು ನೆರವಾಗಬೇಕೆಂದು ಅವರು ಮನವಿ ಮಾಡಿದ್ದಾರೆ.