ಮತಗಟ್ಟೆ ಬಳಿ ವಾಮಾಚಾರ: ಯುವಕರಿಗೆ ದಿಗ್ಬಂಧನ
ಬಳ್ಳಾರಿ: ಚುನಾವಣೆ ಮತಗಟ್ಟೆ ಬಳಿ ವಾಮಾಚಾರ ಮಾಡಲು ಸ್ಕಾರ್ಫಿಯೋದಲ್ಲಿ ಬಂದಿದ್ದ ಯುವಕರನ್ನು ಸ್ಥಳೀಯರು ತಡೆದು ಕೋಣೆಯಲ್ಲಿ ಕೂಡಿಹಾಕಿದ ಘಟನೆ ತಾಲೂಕಿನ ಗೆಣಿಕೆಹಾಳ್ ಗ್ರಾಮದಲ್ಲಿ ಶನಿವಾರ ನಡೆದಿದೆ.
ಯುವಕರು ತಂದಿರುವ ವಾಹನಗಳನ್ನು ಪರಿಶೀಲಿಸಿದಾಗ ಸ್ಕಾರ್ಫಿಯೋದಲ್ಲಿ ಹರಿಷಿಣ ಬೆರಸಿದ ಅಕ್ಕಿ, ನಿಂಬೆಹಣ್ಣು, ವಿಭೂತಿ, ಯಂತ್ರಗಳು ಸಿಕ್ಕಿವೆ. ಇನ್ನು ಅಕ್ಕಿ ಮತ್ತು ಯಂತ್ರಗಳನ್ನು ಯಾವ ಪ್ರದೇಶದಲ್ಲಿ ಹಾಕಬೇಕು ಎಂಬುದರ ಕುರಿತಾಗಿ ಪಟ್ಟಿ ಮಾಡಿಕೊಂಡು ಬಂದಿದ್ದರು. ವಾಹನದಲ್ಲಿ ಕಾಂಗ್ರೆಸ್‌ಗೆ ಸೇರಿದ ಕರಪತ್ರಗಳು ಸಿಕ್ಕಿದ್ದು, ಪುಸ್ತಕದ ಮೇಲೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಪಿ. ರವೀಂದ್ರ ಹಾಗೂ ಜೆ.ಎಸ್. ಆಂಜನೇಯಲು ಅವರ ಭಾವಚಿತ್ರಗಳಿದ್ದವು ಎಂದು ಹೇಳಲಾಗುತ್ತಿದೆ.
ಇನ್ನು ಗೆಣಿಕೆಹಾಳ್ ಸಮೀಪದ ಕ್ಯಾದಿಹಾಳ್‌ನಿಂದ ರಸ್ತೆಯುದ್ದಕ್ಕೂ ಅಕ್ಕಿ, ನಿಂಬೆಹಣ್ಣು ಚೆಲ್ಲಾಡಿದ್ದಾರೆ. ಗೆಣಿಕೆಹಾಳಗೆ ಸಮೀಪಿಸಿದ ಸಂದರ್ಭದಲ್ಲಿ ಸ್ಥಳೀಯರು ಅನುಮಾನಗೊಂಡು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಪಿಡಿಓ ಗಮನಕ್ಕೆ ತಂದಿದ್ದು, ಎಲ್ಲವನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.